ನವದೆಹಲಿ: ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗೆ ಬದಲಾಗಿ ಜಾರಿಗೊಳಿಸುವ ಉದ್ದೇಶದಿಂದ ಮಂಡಿಸಿರುವ ಮೂರು ಮಸೂದೆಗಳನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನ್‌ಕರ್ ಅವರು ಗೃಹ ಸಚಿವಾಲಯದ ಸಂಸದೀಯ ಸ್ಥಾಯಿಸಮಿತಿಯ ಪರಿಶೀಲನೆಗಾಗಿ ಒಪ್ಪಿಸಿದ್ದಾರೆ.
ಬಿಜೆಪಿ ಸಂಸದ, ಉತ್ತರ ಪ್ರದೇಶದ ಮಾಜಿ ಡಿಜಿಪಿ ಬ್ರಿಜ್‌ಲಾಲ್ ನೇತೃತ್ವದ ಸಮಿತಿಗೆ ಈ ಸಂಬಂಧ ವರದಿ ನೀಡಲು ಮೂರು ತಿಂಗಳು ಸಮಯಾವಕಾಶವಿದೆ. ನವೆಂಬರ್ ಮೂರನೇ ವಾರ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶದನಲ್ಲಿ ಮಸೂದೆಗಳನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ರಾಜ್ಯಸಭೆಯ ವಾರ್ತಾಪತ್ರದ ಪ್ರಕಾರ, ಧನಕರ್ ಅವರು ಲೋಕಸಭೆಯ ಸ್ಪೀಕರ್ ಜೊತೆಗೆ ಚರ್ಚಿಸಿದ ಬಳಿಕ ಸ್ಥಾಯಿಸಮಿತಿಯ ಪರಿಶೀಲನೆಗೆ ಒಪ್ಪಿಸಿದ್ದಾರೆ. ಮುಂಗಾರು ಅಧಿವೇಶನದ ಕೊನೆಯ ದಿನ, ಆಗಸ್ಟ್ 11ರಂದು ಈ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.