ನವದೆಹಲಿ: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಮತ್ತೊಂದು ಯಶಸ್ವಿ ಹೆಜ್ಜೆಯನ್ನಿಟ್ಟಿದ್ದು, ಚಂದ್ರಯಾನ-3 ನೌಕೆಯು ಇಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯೊಳಗೆ ಪ್ರವೇಶ ಮಾಡಿದೆ.
ದೇಶದ ಮಹತ್ವಾಕಾಂಕ್ಷೆಯ 'ಚಂದ್ರಯಾನ- 3' ಮತ್ತೊಂದು ಮಹತ್ವದ ಹೆಜ್ಜೆ ಕ್ರಮಿಸಿದ್ದು, ಚಂದ್ರನ ಅಂಗಳದಲ್ಲಿ ಕಾಲಿರಿಸುವ ಪ್ರಯತ್ನದಲ್ಲಿ ಇನ್ನೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದೆ. ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದ್ದು, ಸ್ವತಃ ಇಸ್ರೋ ಮಾಹಿತಿ ನೀಡಿದೆ. ಶನಿವಾರ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಇಸ್ರೋ, 'ಭೂಮಿಯಿಂದ ಉಡಾವಣೆಯಾದ ಚಂದ್ರಯಾನ ನೌಕೆಯು, ಈಗ ತನ್ನ ಉದ್ದೇಶಿದ ಗುರಿಯಾದ ಚಂದ್ರನ ಕಕ್ಷೆಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರವೇಶಿಸುವ ಮೂಲಕ ಮತ್ತೊಂದು ಹಂತವನ್ನು ಸಫಲವಾಗಿ ಪೂರ್ಣಗೊಳಿಸಿದಂತಾಗಿದೆ. ಇದು ಇಸ್ರೋದ ಯೋಜನೆಯ ಮತ್ತೊಂದು ಯಶಸ್ಸಾಗಿದೆ ಎಂದು ಹೇಳಿದೆ.
ಲೂನಾರ್ ಆರ್ಬಿಟ್ ಇನ್ಸರ್ಷನ್ (ಎಲ್‌ಒಐ) ಅಥವಾ ಚಂದ್ರನ ಕಕ್ಷೆ ಸೇರ್ಪಡೆ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರಯಾನದ ಎಲ್ಲಾ ವ್ಯವಸ್ಥೆಗಳೂ ಆರೋಗ್ಯಪೂರ್ಣವಾಗಿವೆ. ಬೆಂಗಳೂರಿನ ಐಎಸ್‌ಟಿಆರ್‌ಎಸಿಯ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ (ಎಂಓಎಕ್ಸ್) ಚಂದ್ರನಿಗೆ ಅತಿ ಸಮೀಪದ ಕಕ್ಷೆಯ ಭಾಗವಾದ ಪೆರಿಲೂನ್‌ನಿಂದ ರೆಟ್ರೋ ಬರ್ನಿಂಗ್ (ರಾಕೆಟ್‌ಗಳನ್ನು ಉಡಾವಣೆ ಮಾಡಿದ ದಿಕ್ಕಿನ ವಿರುದ್ಧ ಭಾಗದಿಂದ ರಾಕೆಟ್ ಉರಿಸುವುದು) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ಹೇಳಿದೆ.
ಇಂದು ಭಾನುವಾರ ಮತ್ತೊಂದು ಅಗ್ನಿ ಪರೀಕ್ಷೆ!
ಇದೇ ವೇಳೆ ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಸಂಕೋಚನ ಪ್ರಕ್ರಿಯೆ (Lunar bound orbit maneuver)ಯನ್ನು ಆಗಸ್ಟ್ 6ರ ಇಂದು ರಾತ್ರಿ 11 ಗಂಟೆಗೆ ನಿಗದಿಪಡಿಸಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ನೌಕೆಯು ಚಂದ್ರನ ಸುತ್ತ 5- 6 ಕಕ್ಷೆಯ ಪಥವನ್ನು ಪೂರ್ಣಗೊಳಿಸಲು ತಯಾರಿ ನಡೆಸಿದೆ. ಕ್ರಮೇಣ ಅದು 100 ಕಿಮೀ ಆರ್ಬಿಟ್‌ನ ವರ್ತುಲಕ್ಕೆ ಪರಿವರ್ತನೆಯಾಗಲಿದೆ. ಮುಂದಿನ ಹತ್ತು ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದ ಪ್ರದೇಶದ ಒಳಗೆ ಇಳಿಯಲು ಸೂಕ್ತವಾದ ಜಾಗವನ್ನು ನಿರ್ಧರಿಸಲಾಗುತ್ತದೆ. ಆಗಸ್ಟ್ 23ರ ಸಂಜೆ 5.47ರ ಸುಮಾರಿಗೆ ಚಂದ್ರಯಾನ ನೌಕೆಯ ಲ್ಯಾಂಡರ್ ಕಕ್ಷೆಯಿಂದ ಹೊರಬರುತ್ತದೆ ಮತ್ತು ಸುಗಮ ಲ್ಯಾಂಡಿಂಗ್‌ಗೆ ಪ್ರಯತ್ನ ಆರಂಭಿಸುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.