ಇಸ್ಲಾಮಾಬಾದ್: ತೊಶಖಾನ ಭ್ರಷ್ಟಾಚಾರ ಪ್ರಕರಣ ಸಾಬೀತಾಗಿದ್ದು, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾಖ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದ್ದು, ಅವರನ್ನು ಬಂಧಿಸಲಾಗಿದೆ. ಜತೆಗೆ ಐದು ವರ್ಷ ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ಅನರ್ಹಗೊಳಿಸಿದೆ.
ಇಮ್ರಾನ್ ಅವರು ಪ್ರಧಾನಿಯಾಗಿದ್ದಾಗ ವಿದೇಶಿ ಗಣ್ಯರಿಂದ ವಾಚ್ ಸೇರಿ ಹಲವು ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದು ಸರ್ಕಾರಿ ಅಧಿಕಾರಿಗಳಿಗೆ ಮಾರಾಟ ಮಾಡಿ ಗಳಿಸಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಪಾಕಿಸ್ತಾನ ಚುನಾವಣಾ ಆಯೋಗವು ಕಳೆದ ವರ್ಷ ಪ್ರಕರಣ ದಾಖಲಿಸಿತ್ತು.
ಉಡುಗೊರೆಗಳ ಮಾರಾಟದಿಂದ ₹14 ಕೋಟಿಗೂ ಹೆಚ್ಚು ಹಣವನ್ನು ಇಮ್ರಾನ್ ಖಾನ್ ಗಳಿಸಿದ್ದರು ಎಂದು ಟಿಲಿಗ್ರಾಪ್ ವರದಿ ತಿಳಿಸಿದೆ.
ಶನಿವಾರ ಇಸ್ಲಾಮಾಬಾದ್‌ನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಹುಮಾಯುನ್ ದಿಲವಾರ್ ಅವರು ತೀರ್ಪು ನೀಡಿದ್ದಾರೆ. ಒಂದು ಲಕ್ಷ ರೂಪಾಯಿ ದಂಡವನ್ನು ಕೂಡ ವಿಧಿಸಿದ್ದು, ದಂಡ ಪಾವತಿ ಮಾಡಲಾಗದೆ ಇದ್ದರೆ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಇಮ್ರಾನ್ ಖಾನ್ ಪರ ಪಕ್ಷ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಹೇಳಿಕೆಯಲ್ಲಿ ತಿಳಿಸಿದೆ.