ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಈ ವೇಳೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೆಲವು ಮಹತ್ವದ ಘೋಷಣೆಗಳನ್ನೂ ಮಾಡಿದ್ದಾರೆ.
ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಮೇಲ್ಮೈಗೆ ಈಗ ಶಿವಶಕ್ತಿ ಎಂದು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರಧಾನಿ ಮೋದಿಯವರ ಈ ಘೋಷಣೆಗೆ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಹೆಸರಿಸುವ ಆ ಲ್ಯಾಂಡಿಂಗ್ ಪಾಯಿಂಟ್‌ಗೆ ನಾವು ಮಾಲೀಕರಲ್ಲ ಎಂದು ಅವರು ಹೇಳಿದರು.
ಹೆಸರಿಡುವುದು ತಮಾಷೆ: ಅಲ್ವಿ
ಮಾಧ್ಯಮ ಜೊತೆ ಮಾತನಾಡಿದ ರಶೀದ್ ಅಲ್ವಿ ಅವರು, 'ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ನರೇಂದ್ರ ಮೋದಿಗೆ ನೀಡಿದವರು ಯಾರು? ಇದು ಹಾಸ್ಯಾಸ್ಪದ. ಈ ನಾಮಕರಣದ ನಂತರ ಇಡೀ ಜಗತ್ತು ನಮ್ಮನ್ನು ನೋಡಿ ನಗುತ್ತದೆ. ಚಂದ್ರನ ಆ ಸ್ಥಳದಲ್ಲಿ ಲ್ಯಾಂಡಿಂಗ್ ಸಂಭವಿಸಿದೆ. ಇದು ತುಂಬಾ ಒಳ್ಳೆಯದು ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ. ಅದರಲ್ಲಿ ಯಾರೂ ಅನುಮಾನಿಸಬಾರದು. ಆದರೆ ನಾವು ಚಂದ್ರನ ಮಾಲೀಕರಲ್ಲ, ಆ ಲ್ಯಾಂಡಿಂಗ್ ಪಾಯಿಂಟ್ ಅನ್ನು ನಾವು ಹೊಂದಿಲ್ಲ. ಇದನ್ನು ಮಾಡುವುದು ಬಿಜೆಪಿಯ ಅಭ್ಯಾಸವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಹೆಸರು ಬದಲಿಸಿಕೊಳ್ಳುವುದು ಅವರ ಅಭ್ಯಾಸವಾಗಿದೆ ಎಂದು ಕಿಡಿಕಾರಿದರು.
'ಇಸ್ರೋಗೆ ನೆಹರೂ ಕಾರಣ'
ಯುಪಿಎ ಆಡಳಿತಾವಧಿಯಲ್ಲಿ ಚಂದ್ರಯಾನ 1 ಇಳಿದ ಸ್ಥಳಕ್ಕೆ ಜವಾಹರ್ ಪಾಯಿಂಟ್ ಎಂದು ಹೆಸರಿಸಲಾಯಿತು. ಆದರೆ ಈ ಲ್ಯಾಂಡಿಂಗ್ ಗೆ ಅಟಲ್ ಬಿಹಾರಿ ವಾಜಪೇಯಿ ಅಥವಾ ಇನ್ನಾರದ್ದೋ ಹೆಸರು ಇಟ್ಟಿಲ್ಲ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರಶೀದ್ ಅಲ್ವಿ, 'ನೀವು ಜವಾಹರಲಾಲ್ ನೆಹರೂ ಅವರನ್ನು ಹೋಲಿಸಲು ಸಾಧ್ಯವಿಲ್ಲ. ಇವತ್ತು ಇಸ್ರೋ ಏನಾಗಿದೆಯೋ ಅದು ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ. 1962ರಲ್ಲಿ ಪಂಡಿತ್ ನೆಹರು ಮತ್ತು ವಿಕ್ರಮ್ ಸಾರಾಭಾಯ್ ಇಸ್ರೋಗೆ ಅಡಿಪಾಯ ಹಾಕಿದರು. ಪಂಡಿತ್ ನೆಹರೂ ಇದರ ಸ್ಥಾಪಕರು. ಅದು ಸಂಪೂರ್ಣವಾಗಿ ವಿಭಿನ್ನ ವಿಷಯವಾಗಿದೆ. ಆದರೆ ಮೋದಿ ಜೀ ಅದನ್ನು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಚಂದ್ರಯಾನ 3 ಲ್ಯಾಂಡಿಂಗ್ ಪಾಯಿಂಟ್ ಗೆ 'ಶಿವಶಕ್ತಿ' ಹೆಸರು
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಯಾರೂ ತಲುಪದ ಸ್ಥಳಕ್ಕೆ ನಾವು ತಲುಪಿದ್ದೇವೆ. ಈ ಹಿಂದೆ ಯಾರೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಆಗಸ್ಟ್ 23ರ ಆ ದಿನ ಪ್ರತಿ ಸೆಕೆಂಡಿಗೆ ನನ್ನ ಕಣ್ಣುಗಳ ಮುಂದೆ ಮರುಪ್ರಸಾರವಾಗುತ್ತಿದೆ. ಟಚ್ ಡೌನ್ ಕನ್ಫರ್ಮ್ ಆದಾಗ ಇಸ್ರೋ ಸೆಂಟರ್ ಮತ್ತು ದೇಶದೆಲ್ಲೆಡೆ ಜನ ಕುಣಿದು ಕುಪ್ಪಳಿಸಿದ ರೀತಿ ಆ ದೃಶ್ಯವನ್ನು ಯಾರು ಮರೆಯುವಂತಿಲ್ಲ. ಕೆಲವು ನೆನಪುಗಳು ಅಮರವಾಗುತ್ತವೆ. ಆ ಕ್ಷಣ ಅಮರವಾಯಿತು. ನಮ್ಮ ಚಂದ್ರಯಾನವು ಬಂದಿಳಿದ ಚಂದ್ರನ ಭಾಗಕ್ಕೆ ಹೆಸರಿಸಲು ಭಾರತ ನಿರ್ಧರಿಸಿದೆ. ಚಂದ್ರಯಾನ -3ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ಈಗ 'ಶಿವಶಕ್ತಿ' ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದರು.