ಹೈದರಾಬಾದ್ : ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆದ ಬೆನ್ನಲ್ಲೇ ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಶುಕ್ರದೆಸೆ ಶುರುವಾಗಿದೆ.
2022ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಖಾಸಗಿ ರಾಕೆಟ್ ಉಡ್ಡಯನ ಮಾಡಿದ್ದ ಹೈದರಾಬಾದ್ ಮೂಲದ ಬಾಹ್ಯಾಕಾಶ ನವೋದ್ಯಮ ಸಂಸ್ಥೆ 'ಸ್ಕೈರೂಟ್ ಏರೋಸ್ಪೇಸ್', ಮುಂದಿನ ವರ್ಷದಿಂದ ಅಂತರಿಕ ಯಾನದ ಚಟುವಟಿಕೆಗಳನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ.
'ಕಂಪನಿಗೆ ಈಗಾಗಲೇ ಸಿಂಗಪುರದ ಜಿಐಸಿ ಪ್ರೈವೇಡ್ ಲಿಮಿಟೆಡ್‌ನಿಂದ ಆರ್ಥಿಕ ನೆರವು ಸಿಕ್ಕಿದೆ. ಮುಂದಿನ ವರ್ಷದ ಅಂತ್ಯದೊಳಗೆ ಹೆಚ್ಚಿನ ಬಂಡವಾಳ ಕ್ರೋಡೀಕರಿಸುವ ಗುರಿ ಹೊಂದಲಾಗಿದೆ' ಎಂದು ಕಂಪನಿಯ ಸಹ ಸಂಸ್ಥಾಪಕ ಪವನ್ ಕುಮಾರ್ ಚಂದನ ಅವರು, ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'2024 ಹಾಗೂ ಆ ನಂತರ ಪ್ರತಿವರ್ಷವೂ ಎರಡು ಉಡ್ಡಯನ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ಎದುರು ನೋಡುತ್ತಿದ್ದೇವೆ. ಬಳಿಕ ಇದನ್ನು ಮತ್ತಷ್ಟು ವಿಸ್ತರಿಸುತ್ತೇವೆ' ಎಂದು ಅವರು ಹೇಳಿದರು.
ಸ್ಕೈರೂಟ್ ಕಂಪನಿಯು ಈ ವರ್ಷಾಂತ್ಯದಲ್ಲಿ ಎರಡನೇ ರಾಕೆಟ್ ಉಡ್ಡಯನಕ್ಕೆ ಸಿದ್ಧತೆ ನಡೆಸಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಅಂತರಿಕ್ಷ ಯಾನಕ್ಕೆ ತಗಲುವ ವೆಚ್ಚವನ್ನು ಕಡಿತಗೊಳಿಸುವ ಗುರಿಯನ್ನೂ ಹೊಂದಿದೆ.
'ಇಸ್ರೊ ಸಾಧನೆಯ ಬಳಿಕ ಜಾಗತಿಕ ಹಾಗೂ ಸ್ಥಳೀಯ ಹೂಡಿಕೆದಾರರಿಗೆ ಸ್ಕೈರೂಟ್‌ನ ವ್ಯವಹಾರದ ಬಗ್ಗೆ ಅರ್ಥವಾಗಿದೆ. ಹಾಗಾಗಿ, ಅವರಿಂದ ಹಲವು ಸಂದೇಶಗಳನ್ನು ಸ್ವೀಕರಿಸುತ್ತಿದ್ದೇವೆ' ಎಂದು ಇಸ್ರೊದ ಮಾಜಿ ವಿಜ್ಞಾನಿಯೂ ಆಗಿರುವ ಅವರು ತಿಳಿಸಿದರು.
'ಮುಂದಿನ ಎರಡು ವರ್ಷಗಳಲ್ಲಿ ಉಡ್ಡಯನ ಯೋಜನೆಗಳಿಗೆ ಅನುಗುಣವಾಗಿ ಕಂಪನಿಯ ಕೆಲಸಗಾರರ ಸಂಖ್ಯೆಯನ್ನು 280ಕ್ಕೆ ಹೆಚ್ಚಿಸಲಾಗುವುದು. ಮುಂದಿನ ವರ್ಷದಿಂದ ಈ ಕಾರ್ಯಕ್ಕೆ ಬಂಡವಾಳ ಹೆಚ್ಚಿಸಲೂ ಚಿಂತನೆ ನಡೆಸಿದೆ. ಜಿಐಸಿಯಿಂದ ಈ ಹಿಂದೆ ನೀಡಿರುವ ಮೊತ್ತಕ್ಕಿಂತಲೂ 51 ಮಿಲಿಯನ್ ಅಮೆರಿಕನ್ ಡಾಲರ್‌ಗೂ (ಅಂದಾಜು ₹ 420 ಕೋಟಿ) ಹೆಚ್ಚು ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದ್ದೇವೆ' ಎಂದ ಅವರು, ಈ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.
'ಸದ್ಯ ನಾವು ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದೇವೆ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಮುಂದಿನ ಹಂತವಾಗಿದೆ. ಮುಂದಿನ ವರ್ಷದ ಅಂತ್ಯದೊಳಗೆ ಇದು ನೆರವೇರಲಿದೆ' ಎಂದು ತಿಳಿಸಿದರು.