ನವದೆಹಲಿ: ಪ್ರಧಾನಿಯಾಗಿ ಕೆಂಪುಕೋಟೆಯಿಂದ ಮಂಗಳವಾರ (15 ಆಗಸ್ಟ್ 2023) ತಮ್ಮ 10ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿರುವ ನರೇಂದ್ರ ಮೋದಿ ಅವರು 90 ನಿಮಿಷಗಳ ಅವಧಿಯಲ್ಲಿ, ಸರಕಾರದ ಸಾಧನೆಗಳನ್ನು, ದೇಶದ ಮುಂದಿರುವ ಸವಾಲುಗಳನ್ನು ಹಾಗೂ ಅವಕಾಶಗಳನ್ನು ಬಿಚ್ಚಿಟ್ಟರು.
ನರೇಂದ್ರ ಮೋದಿ ಅವರು ಕೆಂಪುಕೋಟೆಯಿಂದ ಸ್ವಾತಂತ್ರ್ಯೋತ್ಸವದ ಅತಿ ದೀರ್ಘ ಭಾಷಣ ಮಾಡಿದ್ದು 2016ರಲ್ಲಿ. ಅಂದು ಅವರ ಭಾಷಣದ ಅವಧಿ 96 ನಿಮಿಷಗಳು. 2019ರಲ್ಲಿ ಅವರು 92 ನಿಮಿಷ ಮಾತನಾಡಿದ್ದರೆ, 2017ರಲ್ಲಿ ಕೆಂಪುಕೋಟೆಯಿಂದ ತಮ್ಮ ಅತಿ ಕಿರು ಅವಧಿಯ ಎಂದರೆ 56 ನಿಮಿಷಗಳ ಭಾಷಣ ಮಾಡಿದ್ದರು. 2018ರಲ್ಲಿ ಅವರು ಭಾಷಣ ಮಾಡಿದ್ದು 83 ನಿಮಿಷ.
ಕಳೆದ ವರ್ಷ ಪ್ರಧಾನಿ ಮೋದಿ 74 ನಿಮಿಷಗಳ ಕಾಲ ಮಾತನಾಡಿದ್ದರೆ, 2021ರಲ್ಲಿ 88 ನಿಮಿಷ, 2020ರಲ್ಲಿ 90 ನಿಮಿಷ ಮಾತನಾಡಿದ್ದರು. ಅದಕ್ಕೂ ಮುನ್ನ 2015ರಲ್ಲಿ 86 ನಿಮಿಷ ಮಾತನಾಡಿದ್ದರೆ, ಪ್ರಧಾನಿಯಾಗಿ ಮೊದಲ ಬಾರಿ 2014ರ ಆಗಸ್ಟ್ 15ರಂದು ನರೇಂದ್ರ ಮೋದಿ ಅವರು ಸುಮಾರು 65 ನಿಮಿಷ ಮಾತನಾಡಿದ್ದರು.
ಮಂಗಳವಾರ ಕೆಂಪುಕೋಟೆಯಿಂದ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ, "ನಮ್ಮ ದೇಶದ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳುವ ಯಾವುದೇ ಅವಕಾಶವನ್ನೂ ಕಳೆದುಕೊಳ್ಳಬೇಡಿ. ದೇಶದ ಮೇಲೆ ಹಲವರು ದಂಡೆತ್ತಿ ಬಂದು ಸಾವಿರಾರು ವರ್ಷಗಳ ಕಾಲ ದೇಶವನ್ನು ಕೊಳ್ಳೆ ಹೊಡೆದರೂ, ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಂದ ಭಾರತವು ಇಂದು ಬಲಿಷ್ಠವಾಗಿ ಮತ್ತೆ ಎದ್ದು ನಿಂತಿದೆ" ಎಂದರಲ್ಲದೆ, ಈಗ ನಾವು ಕೈಗೊಳ್ಳುವ ನೀತಿ ನಿರ್ಧಾರಗಳು ಮುಂದಿನ 1000 ವರ್ಷಗಳ ಕಾಲ ದೇಶದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನೆನಪಿಸಿದರು.
2024ರ ಮಹಾ ಚುನಾವಣೆಗೆ ಮುನ್ನ ಇದು ಕೆಂಪುಕೋಟೆಯಿಂದ ಎನ್‌ಡಿಎ ಸರಕಾರದ ಪ್ರಧಾನಿಯ ಕೊನೆಯ ಭಾಷಣ. "ಮುಂದಿನ ವರ್ಷದ ಆಗಸ್ಟ್ 15ರಂದು, ಇದೇ ಕೆಂಪು ಕೋಟೆಯಿಂದ, ನಮ್ಮ ದೇಶವು ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡಲಿದ್ದೇನೆ ಮತ್ತು ನಿಮ್ಮ ಶಕ್ತಿ ಸಾಮರ್ಥ್ಯವನ್ನು, ಭರವಸೆಯನ್ನು ಹಾಗೂ ನಿಮ್ಮ ಯಶಸ್ಸನ್ನು ಮತ್ತಷ್ಟು ವಿಶ್ವಾಸದಿಂದ ಶ್ಲಾಘಿಸಲಿದ್ದೇನೆ" ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು.
ಮನಮೋಹನ್ ಸಿಂಗ್ ಸರಿಗಟ್ಟಿದ ಮೋದಿ
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 10 ಬಾರಿ ಕೆಂಪುಕೋಟೆಯಿಂದ ಭಾಷಣ ಮಾಡುವ ಮೂಲಕ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾಷಣಗಳ ಸಂಖ್ಯೆಯನ್ನು ಸರಿಗಟ್ಟಿದರು. ಮತ್ತು ಪ್ರಧಾನಿ ಪದವಿಗೇರಿ ಕೆಂಪುಕೋಟೆಯಿಂದ ಗರಿಷ್ಠ ಭಾಷಣ ಮಾಡಿದ ಜವಾಹರಲಾಲ್ ನೆಹರು (17) ಮತ್ತು ಇಂದಿರಾ ಗಾಂಧಿ (16) ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.
ಜವಾಹರಲಾಲ್ ನೆಹರು, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ - ಹತ್ತು ಅಥವಾ ಹೆಚ್ಚು ಬಾರಿ ಕೆಂಪುಕೋಟೆಯಿಂದ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿಗಳು.
ಒಮ್ಮೆ ಮಾತ್ರ ಮಾತನಾಡಿದವರು
ಪ್ರಧಾನಿ ಪದವಿಗೇರಿ ಕೇವಲ ಒಮ್ಮೆ ಮಾತ್ರವೇ ಕೆಂಪುಕೋಟೆಯಿಂದ ಮಾತನಾಡಿದವರೆಂದರೆ, ಇಂದ್ರ ಕುಮಾರ್ ಗುಜ್ರಾಲ್, ವಿಶ್ವನಾಥ್ ಪ್ರತಾಪ್ ಸಿಂಗ್, ಹೆಚ್.ಡಿ.ದೇವೇಗೌಡ ಹಾಗೂ ಚರಣ್ ಸಿಂಗ್.
ಅವಕಾಶವೇ ಪಡೆಯದ ಪ್ರಧಾನಿ
ಸ್ವಾತಂತ್ರ್ಯೋತ್ಸವ ಭಾಷಣ ಮಾಡುವುದಕ್ಕೆ ಅವಕಾಶವನ್ನೇ ಪಡೆಯದವರು ಮಾಜಿ ಪ್ರಧಾನಿ ಚಂದ್ರಶೇಖರ್. ಯಾಕೆಂದರೆ ಅವರ ಪ್ರಧಾನಿ ಪಟ್ಟದ ಅವಧಿ ಕೇವಲ 8 ತಿಂಗಳು (10 ನವೆಂಬರ್, 1990 ರಿಂದ 21 ಜೂನ್, 1991).
ಉಳಿದಂತೆ ಅಟಲ್ ಬಿಹಾರಿ ವಾಜಪೇಯಿ 6 ಬಾರಿ, ಪಿ.ವಿ.ನರಸಿಂಹ ರಾವ್ ಮತ್ತು ರಾಜೀವ್ ಗಾಂಧಿ ತಲಾ ಐದು ಬಾರಿ, ಮೊರಾರ್ಜಿ ದೇಸಾಯಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ತಲಾ 2 ಬಾರಿ ಪ್ರಧಾನ ಮಂತ್ರಿ ಸ್ಥಾನದಿಂದ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದರು.