ಬೆಂಗಳೂರು: ಚಂದ್ರಯಾನ-3ರ ಲ್ಯಾಂಡಿಂಗ್‌ಗಾಗಿ ಇಸ್ರೋ ಚಂದ್ರನ ದಕ್ಷಿಣ ತುದಿಯನ್ನು ಇಸ್ರೋ ಆಯ್ಕೆ ಮಾಡಿದ್ದೇಕೆ? ಎಂಬುದರ ಕುರಿತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಗುರುವಾರ ವಿವರಿಸಿದ್ದಾರೆ.
ಸುಮಾರು 70 ಡಿಗ್ರಿ ಗಳಿಷ್ಟಿರುವ ದಕ್ಷಿಣ ಧ್ರುವದ ಬಳಿಗೆ ನಾವು ಹೋಗಿದ್ದೇವೆ. ಅದು ಸೂರ್ಯನಿಂದ ಕಡಿಮೆ ಪ್ರಕಾಶಿಸುವಿಕೆಯೊಂದಿಗೆ ಒಂದು ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ. ಹೆಚ್ಚಿನ ವೈಜ್ಞಾನಿಕ ವಿಷಯ ತಿಳಿಯಲು ಅದು ಪ್ರಶಸ್ತವಾಗಿದೆ. ಅಂತಿಮವಾಗಿ ಮಾನವರು ಹೋಗಿ ವಸಾಹತು ರಚಿಸಲು, ನಂತರ ಪ್ರಯಾಣಿಸಲು ಬಯಸುವುದರಿಂದ ವಿಜ್ಞಾನಿಗಳು ದಕ್ಷಿಣ ತುದಿಯತ್ತ ಹೆಚ್ಚಿನ ಆಸಕ್ತಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅದು ನಾವು ಹುಡುಕುತ್ತಿರುವ ಅತ್ಯುತ್ತಮ ಸ್ಥಳವಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಮುಂದಿನ ಇಸ್ರೋ ಯೋಜನೆಗಳ ಕುರಿತು ಮಾತನಾಡಿದ ಸೋಮನಾಥ್, ಸೂರ್ಯನ ಬಳಿಗೆ ನೌಕೆ ಕಳುಹಿಸುವ ಆದಿತ್ಯ ಮಿಷನ್ ಸೆಪ್ಟೆಂಬರ್‌ನಲ್ಲಿ ಉಡಾವಣೆಗೆ ಸಿದ್ಧವಾಗುತ್ತಿದೆ. ಗಗನ ಯಾನ ಯೋಜನೆ ಇನ್ನೂ ಪ್ರಗತಿಯಲ್ಲಿದೆ. ಅನೇಕ ಪರೀಕ್ಷಾ ಕಾರ್ಯಾಚರಣೆಗಳ ಮೂಲಕ 2025 ರ ವೇಳೆಗೆ ಮೊದಲ ಮಾನವಸಹಿತ ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಇನ್ನೂ ಪ್ರಗ್ಯಾನ್ ರೋವರ್ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು, ಇದು ಎರಡು ಉಪಕರಣಗಳನ್ನು ಹೊಂದಿದೆ, ಎರಡೂ ಚಂದ್ರನ ಮೇಲಿನ ಧಾತುರೂಪದ ಸಂಯೋಜನೆಯ ಸಂಶೋಧನೆಗಳು ಮತ್ತು ರಾಸಾಯನಿಕ ಸಂಯೋಜನೆಗಳಿಗೆ ಸಂಬಂಧಿಸಿದೆ. ಮೇಲಾಗಿ ಇದು ಚಂದ್ರನ ಮೇಲ್ಮೈ ಮೇಲೆ ಸಂಚರಿಸುತ್ತದೆ. ಭವಿಷ್ಯದ ಹುಡುಕಾಟಕ್ಕೆ ಅಗತ್ಯವಾಗಿರುವ ರೊಬೊಟಿಕ್ ಮಾರ್ಗ ಪ್ಲಾನ್ ಬಗ್ಗೆಯೂ ಕಾರ್ಯ ಪ್ರವೃತ್ತರಾಗುವುದಾಗಿ ಅವರು ತಿಳಿಸಿದರು.