ಬೆಂಗಳೂರು: ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲ್ಮೈ ನಲ್ಲಿ ಪ್ರಜ್ಞಾನ್ ರೋವರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ನಡುವೆ ವಿಕ್ರಮ್ ಲ್ಯಾಂಡರ್ ನಲ್ಲಿರುವ ಚೇಸ್ಟ್ ಪೇಲೋಡ್ ಚಂದ್ರನ ಮೇಲ್ಮೈ ನಿಂದ ಮೊದಲ ಮಹತ್ವದ ಮಾಹಿತಿಯನ್ನು ಇಸ್ರೋಗೆ ರವಾನಿಸಿದೆ.
ಚೇಸ್ಟ್ ಅಥವಾ ‘ಚಂದ್ರಾಸ್ ಸರ್ಫೇಸ್ ಥರ್ಮೊ ಫಿಸಿಕಲ್ ಎಕ್ಸಪಿರಿಮೆಂಟ್ ನಿಂದ ಮೊದಲ ಅವಲೋಕನಗಳು ಇಲ್ಲಿದೆ. ಚಂದ್ರನ ಮೇಲ್ಮೈಯ ತಾಪಮಾನ ಅರ್ಥ ಮಾಡಿಕೊಳ್ಳಲು ಚೇಸ್ಟ್ ಚಂದ್ರನ ಮೇಲ್ಪದರವನ್ನು 10 ಸೆಂಟಿಮೀಟರ್ ನಷ್ಟು ಕೊರೆದು ಅದರ ಮಾಹಿತಿಯನ್ನು ಇಸ್ರೋಗೆ ರವಾನೆ ಮಾಡಿದೆ ಎಂದು ಟ್ವಿಟರ್ ನಲ್ಲಿ ಇಸ್ರೋ ಮಾಹಿತಿ ನೀಡಿದೆ.
ಚೇಸ್ಟ್ ನಲ್ಲಿ ತಾಪಮಾನ ಅರಿಯುವ ಸಾಧನವನ್ನು ಸಜ್ಜುಗೊಳಿಸಲಾಗಿದ್ದು, ಮೇಲ್ಮೈ ನಿಂದ 10 ಸೆಂಟೀಮೀಟರ್ ಕೆಳಗೆ ಹೋಗುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 10 ಪ್ರತ್ಯೇಕ ತಾಪಮಾನ ಸಂವೇದಕಗಳನ್ನು ಅಳವಡಿಕೆ ಮಾಡಲಾಗಿದೆ.
"ವಿವಿಧ ಆಳಗಳಲ್ಲಿ ಚಂದ್ರನ ಮೇಲ್ಮೈ/ಸಮೀಪದ ಮೇಲ್ಮೈಯ ತಾಪಮಾನ ವ್ಯತ್ಯಾಸಗಳನ್ನು" ವಿವರಿಸುವ ಗ್ರಾಫ್ ಅನ್ನು ಸಹ ಇಸ್ರೋ ಹಂಚಿಕೊಂಡಿದೆ.
ಪ್ರಸ್ತುತಪಡಿಸಲಾದ ಗ್ರಾಫ್ ಚಂದ್ರನ ಮೇಲ್ಮೈ/ಸಮೀಪ-ಮೇಲ್ಮೈಯ ವಿವಿಧ ಆಳಗಳಲ್ಲಿ ತಾಪಮಾನ ವ್ಯತ್ಯಾಸಗಳನ್ನು ವಿವರಿಸುತ್ತದೆ, ಚಂದ್ರನ ದಕ್ಷಿಣ ಧ್ರುವಕ್ಕೆ ಇದು ಮೊದಲ ಪ್ರೊಫೈಲ್ ಆಗಿದ್ದು, ವಿವರವಾದ ಅವಲೋಕನಗಳು ನಡೆಯುತ್ತಿವೆ" ಎಂದು ಇಸ್ರೋ ತಿಳಿಸಿದೆ.