ಇಂಫಾಲ್: ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ವಸತಿ ಕಳೆದುಕೊಂಡಿರುವವರಿಗಾಗಿ ಮಣಿಪುರ ಸರ್ಕಾರವು 3,000 ಮೊದಲೇ ಸಿದ್ಧಪಡಿಸಿದ (ಪ್ರೀ-ಫ್ಯಾಬ್ರಿಕೇಟೆಡ್) ಮನೆಗಳ ನಿರ್ಮಾಣ ಆರಂಭಿಸಿದೆ.
ಇಂಫಾಲ್: ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ವಸತಿ ಕಳೆದುಕೊಂಡಿರುವವರಿಗಾಗಿ ಮಣಿಪುರ ಸರ್ಕಾರವು 3,000 ಮೊದಲೇ ಸಿದ್ಧಪಡಿಸಿದ (ಪ್ರೀ-ಫ್ಯಾಬ್ರಿಕೇಟೆಡ್) ಮನೆಗಳ ನಿರ್ಮಾಣ ಆರಂಭಿಸಿದೆ.
ಗಲಭೆಯಿಂದಾಗಿ ನಿರಾಶ್ರಿತರಾಗಿರುವ ಹೆಚ್ಚಿನವರು ಕಳೆದ ಮೂರು ತಿಂಗಳುಗಳಿಂದ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
'ನಿರ್ಮಾಣ ಕಾರ್ಯವು ಐದು ವಿವಿಧ ಸ್ಥಳಗಳಲ್ಲಿ ಜೂನ್ 26ರಿಂದ ಆರಂಭವಾಗಿದೆ. ಸರ್ಕಾರ ಸೂಚಿಸಿರುವ ಕಾಲಮಿತಿಯಲ್ಲಿ ಸಾಧ್ಯವಾದಷ್ಟು ಬೇಗ ಯೋಜನೆ ಪೂರ್ಣಗೊಳಿಸಲಾಗುವುದು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಫಾಲ್ ಪೂರ್ವ ಜಿಲ್ಲೆಯಲ್ಲಿರುವ ಸಾಜಿವ ಕಾರಾಗೃಹದ ಬಳಿ ನಿರ್ಮಿಸುತ್ತಿರುವ 200 ಮನೆಗಳ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆಗಸ್ಟ್ 20ರೊಳಗೆ ಮುಗಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಪ್ರತಿ ಸಾಲಿನಲ್ಲಿ 10 ಮನೆಗಳು ಇರಲಿದ್ದು, ಎಲ್ಲ ಮನೆಗಳು ಎರಡು ರೂಂಗಳು, ಒಂದು ಶೌಚಾಲಯ, ಅಡುಗೆ ಕೋಣೆಯನ್ನು ಹೊಂದಿರಲಿವೆ. 160 ಕಾರ್ಮಿಕರು ಈ ಮನೆಗಳ ನಿರ್ಮಾಣದಲ್ಲಿ ಭಾಗವಹಿಸಿದ್ದಾರೆ.
ಥೌಬಲ್ ಜಿಲ್ಲೆಯ ಯೈಥಿಬಿ ಲೌಕೊಲ್ ಪ್ರದೇಶದಲ್ಲಿ ಕನಿಷ್ಠ 400 ಕುಟುಂಬಗಳಿಗೆ ಮನೆ ನಿರ್ಮಿಸಲಾಗುತ್ತಿದೆ. ಬಿಷ್ಣುಪುರ ಜಿಲ್ಲೆಯ ಕ್ವಾಟ್ಕಾದಲ್ಲಿ 120 ಮನೆಗಳನ್ನು ಕಟ್ಟಲಾಗುತ್ತಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮೈ ಮತ್ತು ಇಂಫಾಲ್ ಪೂರ್ವದ ಸವೊಮ್‌ಬಂಗ್‌ನಲ್ಲಿಯೂ ಇಂತಹ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಪುರದಲ್ಲಿ ಮೇ 3ರಿಂದ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.