ಬೆಂಗಳೂರು: ಭಾರತದ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದಿದ್ದು, ದೇಶದ 140 ಕೋಟಿ ಜನರಿಗೆ ಹೆಮ್ಮೆ ತಂದಿದೆ. ನಿಗದಿಯಂತೆ ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು.
ವಿಶ್ವವೇ ಉತ್ಸುಕತೆಯಿಂದ ವೀಕ್ಷಿಸಿದ್ದ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯ ನಂತರ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಲ್ಯಾಂಡರ್ ಇಳಿಯುವ ಮೊದಲು ದೇಶದ ವಿಜ್ಞಾನಿಗಳು ಮತ್ತು ಜನರು ಬಹಳ ಆಸಕ್ತಿಯಿಂದ ವೀಕ್ಷಿಸಿದರು.
ಮೂರನೇ ಚಂದ್ರಯಾನ, ಚಂದ್ರಯಾನ-3 ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಜುಲೈ 14 ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಿತ್ತು. ಹಲವಾರು ಹಂತಗಳಲ್ಲಿ ಡಿ-ಆರ್ಬಿಟ್ ಮಾಡಿದ ನಂತರ ಚಂದ್ರನ ಹತ್ತಿರಕ್ಕೆ ತಂದು ನಂತರ, ಲ್ಯಾಂಡರ್ ಮಾಡ್ಯೂಲ್ ಅನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಿಸಲಾಯಿತು.
ನಂತರ ಇಂದು ಸಂಜೆ 5.45ಕ್ಕೆ ಲ್ಯಾಂಡಿಂಗ್‌ಗೆ ಅಂತಿಮ ಕ್ರಮಕೈಗೊಳ್ಳಲಾಯಿತು. ಲ್ಯಾಂಡರ್‌ನ ವೇಗವು ಕ್ರಮೇಣ ಚಂದ್ರನ ಮೇಲ್ಮೈಗೆ ಇಳಿಯುತ್ತಿದ್ದಂತೆ, ಅದು ಇತಿಹಾಸವಾಯಿತು.
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನೇರಪ್ರಸಾರದಲ್ಲಿ ವೀಕ್ಷಿಸಿ ಬಳಿಕ ಶುಭಹಾರಯಿಸಿದರು.