ಅಲಿಗಢ: ಅಯೋಧ್ಯೆಯ ರಾಮ ಮಂದಿರಕ್ಕೆಂದು ಅಲಿಗಢನ ಹಿರಿಯ ಕುಶಲಕರ್ಮಿಯೊಬ್ಬರು ಕೈಯಿಂದಲೇ 400 ಕೆ.ಜಿ ತೂಕದ ಬೀಗವನ್ನು ತಯಾರಿಸಿದ್ದಾರೆ.
ರಾಮನ ಭಕ್ತರಾಗಿರುವ ಸತ್ಯ ಪ್ರಕಾಶ ಶರ್ಮ ಎಂಬುವವರು ಒಂದು ತಿಂಗಳ ಅವಧಿಯಲ್ಲಿ ಈ ಬೀಗವನ್ನು ತಯಾರಿಸಿದ್ದಾರೆ. ಇದು ಕೈಯಿಂದ ತಯಾರಿಸಿದ ಜಗತ್ತಿನ ಅತಿದೊಡ್ಡ ಬೀಗ ಎಂದು ಹೇಳಲಾಗಿದ್ದು, ರಾಮ ಮಂದಿರ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ.
ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವಿರುವ ಬೀಗವನ್ನು ನಾಲ್ಕು ಅಡಿ ಕೀಲಿಯೊಂದಿಗೆ ಸ್ವಂತ ಹಣದಿಂದ ತಯಾರಿಸಿದ್ದಾರೆ. ಬೀಗವನ್ನು ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಶರ್ಮಾ ಹೇಳಿದ್ದಾರೆ.
'ಸತ್ಯ ಪ್ರಕಾಶ್ ಶರ್ಮಾ ಅವರಿಂದ ಬೀಗವನ್ನು ಪಡೆದು, ಯಾವ ಜಾಗಕ್ಕೆ ಅಳವಡಿಸಬಹುದು ಎಂದು ನಿರ್ಧರಿಸಲಾಗುವುದು" ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಶತಮಾನಗಳಿಂದಲೂ ಸತ್ಯ ಪ್ರಕಾಶ್ ಅವರ ಕುಟುಂಬವು ಕೈಯಿಂದ ಮಾಡಿದ ಬೀಗಗಳನ್ನು ತಯಾರಿಸುವಲ್ಲಿ ತೊಡಗಿದೆ. ಶರ್ಮಾ ಅವರು ಕಳೆದ 45 ವರ್ಷಗಳಿಂದ 'ತಾಲ ನಗರಿ' ಅಥವಾ ಬೀಗಗಳ ಭೂಮಿ ಎಂದು ಕರೆಯಲ್ಪಡುವ ಅಲಿಗಢದಲ್ಲಿ ಬೀಗ ತಯಾರಿಸುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ವಾರ್ಷಿಕ ಅಲಿಗಢ ಪ್ರದರ್ಶನದಲ್ಲಿ ಬೀಗವನ್ನು ಪ್ರದರ್ಶಿಸಲಾಗಿತ್ತು. ಈಗ ಸಣ್ಣ ಮಾರ್ಪಾಡುಗಳನ್ನು ಮಾಡಿ, ಚಂದಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶರ್ಮಾ ಹೇಳುತ್ತಾರೆ.
ಮುಂದಿನ ವರ್ಷ ಜನವರಿ 21, 22, ಮತ್ತು 23 ರಂದು ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭವನ್ನು ನಡೆಸಲು ದೇವಾಲಯದ ಟ್ರಸ್ಟ್ ನಿರ್ಧರಿಸಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ಕಳುಹಿಸಲಾಗುವುದು ಎಂದು ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.