ನವದೆಹಲಿ: ಟೊಮೊಟೊ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಲಾಗಿದ್ದರು. ಇದೀಗ ಟೊಮೆಟೊ ಬೆಲೆ ಕೆಜಿಗೆ 40 ರಿಂದ 50 ರೂ.ಗೆ ತಲುಪಿದೆ. ಟೊಮೇಟೊ ಬೆಲೆ ಏರಿಕೆಯ ನಡುವೆಯೇ ಈರುಳ್ಳಿ ಸರ್ಕಾರಕ್ಕೆ ಆತಂಕ ಮೂಡಿಸಿದೆ.
ಈರುಳ್ಳಿ ಬೆಲೆ ಏರಿಕೆಯ ಸ್ಥಿತಿ ಟೊಮೊಟೊದಂತಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬೆಲೆ ಏರಿಕೆಯನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಲು ಈರುಳ್ಳಿ ರಫ್ತಿನ ಮೇಲೆ ಶೇಕಡಾ 40ರಷ್ಟು ಸುಂಕವನ್ನು ವಿಧಿಸಲು ಕೇಂದ್ರ ನಿರ್ಧರಿಸಿದೆ. 2023ರ ಡಿಸೆಂಬರ್ 3ರವರೆಗೆ ಈರುಳ್ಳಿ ಮೇಲೆ ಶೇಕಡಾ 40 ರಫ್ತು ಸುಂಕವನ್ನು ವಿಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ.
ಏರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲೆ ಶೇ.40 ರಫ್ತು ಸುಂಕ ವಿಧಿಸಿದೆ. ಈ ಶುಲ್ಕ 31 ಡಿಸೆಂಬರ್ 2023 ರವರೆಗೆ ಮುಂದುವರಿಯುತ್ತದೆ. ವಾಸ್ತವವಾಗಿ, ಈರುಳ್ಳಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ.
ಈರುಳ್ಳಿ ಬೆಲೆ 50 ರಿಂದ 60 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಈ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಹಿಂದೆ, ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು, ಹೊಸ ಬೆಳೆ ಬರುವವರೆಗೆ ಕೆಲವು ಪ್ರದೇಶಗಳಲ್ಲಿ ಈರುಳ್ಳಿಯನ್ನು ಅದರ ಬಫರ್ ಸ್ಟಾಕ್‌ನಿಂದ ಬಿಡುಗಡೆ ಮಾಡುವುದಾಗಿ ಸರ್ಕಾರ ಘೋಷಿಸಿತ್ತು.
ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಕಳಪೆ ಗುಣಮಟ್ಟದ ಈರುಳ್ಳಿ, ಟೊಮೆಟೊ ಮತ್ತು ಇತರ ತರಕಾರಿಗಳ ಹೆಚ್ಚಿನ ಬೆಲೆಗಳು ಈರುಳ್ಳಿ ಬೆಲೆ ದುಬಾರಿಯಾಗಲು ಕಾರಣವಾಗಿವೆ. ಗಮನಾರ್ಹವಾಗಿ, ತರಕಾರಿಗಳು ಮತ್ತು ಧಾನ್ಯಗಳ ಬೆಲೆಯಲ್ಲಿ ತೀವ್ರ ಜಿಗಿತದಿಂದಾಗಿ, ಚಿಲ್ಲರೆ ಹಣದುಬ್ಬರ ದರದಲ್ಲಿ ಹೆಚ್ಚಳವಾಗಿದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.44ಕ್ಕೆ ತಲುಪಿತ್ತು. ಆಹಾರ ಪದಾರ್ಥಗಳ ಬೆಲೆ ಏರಿಕೆ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ.