ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾದ ಪುದುಪಳ್ಳಿ ಕ್ಷೇತ್ರ ಸೇರಿದಂತೆ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾದ ಪುದುಪಳ್ಳಿ ಕ್ಷೇತ್ರ ಸೇರಿದಂತೆ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.
ತ್ರಿಪುರಾದಲ್ಲಿ ಎರಡು ಮತ್ತು ಕೇರಳ, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಶಾಸಕ ಜಗರ್ನಾಥ್ ಮಹ್ತೋ ಅವರ ನಿಧನದ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಡುಮ್ರಿ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಹಾಗೆಯೇ, ಶಾಸಕ ಸಂಸುಲ್ ಹಕ್ ಅವರ ನಿಧನ ಮತ್ತು ಪ್ರತಿಮಾ ಭೌಮಿಕ್ ಅವರ ರಾಜೀನಾಮೆಯಿಂದಾಗಿ ತ್ರಿಪುರಾದ ಬೊಕ್ಸಾನಗರ ಮತ್ತು ಧನಪುರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರವು ಶಾಸಕರಾಗಿದ್ದ ಬಿಷ್ಣು ಪದಾ ರಾಯ್ ಅವರ ನಿಧನದಿಂದ ತೆರವಾಗಿತ್ತು. ಬಿಜೆಪಿ ಸೇರಲು ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ ನಂತರ ಉತ್ತರ ಪ್ರದೇಶದ ಘೋಸಿ ಸ್ಥಾನವು ತೆರವಾಗಿತ್ತು.
ಶಾಸಕ ಚಂದನ್ ರಾಮ್ ದಾಸ್ ನಿಧನದಿಂದಾಗಿ ಉತ್ತರಾಖಂಡದ ಬಾಗೇಶ್ವರ್ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಹಾಗೆಯೇ, ಉಮ್ಮನ್ ಚಾಂಡಿ ಅವರು ಕೇರಳದ ಪುದುಪಳ್ಳಿ ಕ್ಷೇತ್ರದ ಶಾಸಕರಾಗಿ 50ಕ್ಕೂಹೆಚ್ಚು ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ನಿಧನದ ನಂತರ ಆ ಕ್ಷೇತ್ರವು ತೆರವಾಗಿದೆ.
ಚುನಾವಣಾ ಆಯೋಗ ಉಪಚುನಾವಣೆಯ ದಿನಾಂಕ ಘೋಷಿಸಿದ ಕೆಲವೇ ಗಂಟೆಗಳ ನಂತರ ಪುದುಪಳ್ಳಿ ಕ್ಷೇತ್ರಕ್ಕೆ ಉಮ್ಮನ್ ಚಾಂಡಿ ಅವರ ಮಗ ಚಾಂಡಿ ಉಮ್ಮನ್ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದೆ.