ಕೊಟ್ಟಾಯಂ: ಹೃದಯಾಘಾತದ ಬಳಿಕ ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೇರಳದ 17 ವರ್ಷದ ಹುಡುಗಿ ಅನ್ನಾ ಮರಿಯಾ ಕೊನೆಯುಸಿರೆಳೆದಿದ್ದಾಳೆ. ಮರಿಯಾ ಉಳಿವಿಗಾಗಿ ಸಾವಿರಾರು ಜನರ ಭರವಸೆ ಹಾಗೂ ಪ್ರಾರ್ಥನೆ ಕೊನೆಗೂ ಫಲ ನೀಡಲೇ ಇಲ್ಲ.
ಫಲ ಕೊಡದ ಪ್ರಯತ್ನ
ಕಳೆದ ತಿಂಗಳು 26 ರಂದು ಎರ್ನಾಕುಲಂ ಅಮೃತಾ ಆಸ್ಪತ್ರೆಯಿಂದ ಕೊಟ್ಟಾಯಂ ಕ್ಯಾರಿಟಾಸ್ ಆಸ್ಪತ್ರೆಗೆ ಮರಿಯಾಳನ್ನು ಸ್ಥಳಾಂತರ ಮಾಡಲಾಗಿತ್ತು. ಆಕೆ ಸಾವಿನ ವಿರುದ್ಧ ಹೋರಾಡಿ ಮರಳಿ ಬರುತ್ತಾಳೆ ಎಂಬ ನಿರೀಕ್ಷೆಯನ್ನು ಸಂಬಂಧಿಕರು ಮತ್ತು ಸ್ಥಳೀಯರು ಇಟ್ಟುಕೊಂಡಿದ್ದರು. ಆದರೆ, ಸೋಂಕಿನಿಂದ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಐಸಿಯುನಲ್ಲಿ 64 ದಿನಗಳ ಹೋರಾಟದ ಬಳಿಕ ಶುಕ್ರವಾರ (ಆ.4) ರಾತ್ರಿ 11.49ಕ್ಕೆ ಮರಿಯಾ ಶಾಂತಿಯುತವಾಗಿ ತನ್ನ ಕಣ್ಣುಗಳನ್ನು ಮುಚ್ಚಿದಳು. ಈ ಸುದ್ದಿಯನ್ನು ಕೇಳಿ ಪಾಲಕರು, ಬಂಧು-ಮಿತ್ರರಿಗೆ ಆಘಾತವೇ ಆಯಿತು. ಇಎನ್ಟಿ, ಹೃದ್ರೋಗ, ಶ್ವಾಸಕೋಶಶಾಸ್ತ್ರ, ನರವಿಜ್ಞಾನ ಮತ್ತು ಕ್ರಿಟಿಕಲ್ ಕೇರ್ ವಿಭಾಗದ ವೈದ್ಯಕೀಯ ತಂಡಗಳ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಹೃದಯಾಘಾತದಿಂದ ತೀವ್ರವಾಗಿ ಬಳಲಿದ ಮರಿಯಾ, ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದಳು.
ಘಟನೆ ಹಿನ್ನೆಲೆ ಏನು?
ಜೂನ್ 1ರಂದು ಬೆಳಗ್ಗೆ 6.30ರ ಸುಮಾರಿಗೆ ಇರಟ್ಟಯಾರ್ನಲ್ಲಿರುವ ಸೆಂಟ್ ಥಾಮಸ್ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಾಗ ಮರಿಯಾಗೆ ಹೃದಯಾಘಾತವಾಗಿತ್ತು. ಅವರ ಚಿಕ್ಕಮ್ಮನ ಅಂತ್ಯ ಸಂಸ್ಕಾರ ನಡೆದ ಮಾರನೇ ದಿನವೇ ಈ ಘಟನೆ ನಡೆಯಿತು. ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎರ್ನಾಕುಲಂನ ಅಮೃತಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆಕೆಯ ಆರೋಗ್ಯ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಆಕೆಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸಚಿವ ರೋಶಿ ಆಗಸ್ಟಿನ್ ಸಹ ಮಧ್ಯಪ್ರವೇಶಿಸಿದ್ದರು. ಮಾಧ್ಯಮಗಳು, ಪೊಲೀಸರು ಮತ್ತು ಜನರು ಸಹ ಸಾಥ್ ನೀಡಿದ್ದರು. ಜನರ ಸಾಮೂಹಿಕ ಪ್ರಯತ್ನದಿಂದ ಆಂಬ್ಯುಲೆನ್ಸ್ ಕೇರಳದ ಕಟ್ಟಪ್ಪನ ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಅಮೃತಾ ಆಸ್ಪತ್ರೆವರೆಗಿನ 132 ಕಿ.ಮೀ ದೂರವನ್ನು ಕೇವಲ ಎರಡು ಗಂಟೆ 40 ನಿಮಿಷಗಳಲ್ಲಿ ಕ್ರಮಿಸಿತು.
ವಿಧಿಯಾಟವೇ ಬೇರೆ ಇತ್ತು
ಆರಂಭದಲ್ಲಿ, ಭರವಸೆಯ ಬೆಳವಣಿಗೆ ಎಂಬಂತೆ ಪರಿಣಿತ ವೈದ್ಯರ ಆರೈಕೆಯಲ್ಲಿ ಮರಿಯಾಳ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು. ಇದರಿಂದ ಎಲ್ಲರು ಖುಷಿಯಾಗಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು. ಆ ಬಳಿಕ ಮರಿಯಾ ಸ್ಥಿತಿ ಹದಗೆಟ್ಟಿತು. ಹೀಗಾಗಿ ಜುಲೈ 26 ರಂದು ಆಕೆಯನ್ನು ಕೊಟ್ಟಾಯಂ ಕ್ಯಾರಿಟಾಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಮರಿಯಾ ಮತ್ತೆ ವಾಪಸ್ ಬರುತ್ತಾಳೆ ಎಂಬ ವಿಶ್ವಾಸ ಮಾತ್ರ ಎಲ್ಲರಲ್ಲೂ ಇತ್ತು. ಆದರೆ, ಎಲ್ಲರ ನಿರೀಕ್ಷೆ ಹುಸಿಯಾಗಿದ್ದು, ಅನ್ನಾ ಮರಿಯಾ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.
ನಿನ್ನೆ ಮಧ್ಯಾಹ್ನ 2ಗಂಟೆಗೆ ಇರತ್ತಾಯರ್‌ನ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಮರಿಯಾ ಅಂತ್ಯಕ್ರಿಯೆ ನೆರವೇರಿತು.