ಗುವಾಹಟಿ: ಹಿಂಸಾಚಾರ ಪೀಡಿತ ಮಣಿಪುರದ ಕೆಲವು ಭಾಗಗಳಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದ ನಂತರ ಭದ್ರತಾ ಪಡೆಗಳು ಗುಡ್ಡಗಾಡು ಅಂಚಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು ಏಳು ಅಕ್ರಮ ಬಂಕರ್‌ಗಳನ್ನು ನಾಶಪಡಿಸಿವೆ.
ಭದ್ರತಾ ಪಡೆಗಳು ಮತ್ತು ಪೊಲೀಸರು ಕೌತ್ರುಕ್ ಬೆಟ್ಟ ಶ್ರೇಣಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ 7 ಅಕ್ರಮ ಬಂಕರ್‌ಗಳನ್ನು ನಾಶಪಡಿಸಿವೆ ಎಂದು ಮಣಿಪುರ ಪೊಲೀಸರು ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಕೌತ್ರುಕ್, ಹರಾಥೆಲ್ ಮತ್ತು ಸೆಂಜಮ್ ಚಿರಾಂಗ್ ಪ್ರದೇಶಗಳಲ್ಲಿ ಮತ್ತೆ ಗುಂಡಿನ ಚಕಮಕಿಗಳು ನಡೆದಿದ್ದು, ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು ನಾಗರಿಕರು ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯ ನಂತರ ಅಕ್ರಮ ಬಂಕರ್‌ಗಳನ್ನು ಧ್ವಂಸಗೊಳಿಸಲಾಗಿದೆ.
ಗುರುವಾರ ನಡೆದ ಮತ್ತೊಂದು ಘಟನೆಯಲ್ಲಿ, ಹಿಂದಿನ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಬುಡಕಟ್ಟು ಜನಾಂಗದವರ ಶವಗಳನ್ನು ವಿವಾದಿತ ಸ್ಥಳದಲ್ಲಿ ಸಾಮೂಹಿಕವಾಗಿ ಹೂಳಲು ತೆರಳುತ್ತಿದ್ದ ಗುಂಪನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಬಲವನ್ನು ಮಾಡಿದಾಗ ಈ ವೇಳೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಗುರುವಾರ ಅಶಿಸ್ತಿನ ಗುಂಪೊಂದು ಇಂಡಿಯಾ ರಿಸರ್ವ್ ಬೆಟಾಲಿಯನ್ ಮತ್ತು ಎರಡು ಪೊಲೀಸ್ ಔಟ್‌ಪೋಸ್ಟ್‌ಗಳಿಗೆ ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ಲೂಟಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನಿಖರ ಅಂಕಿಅಂಶಗಳನ್ನು ಹಂಚಿಕೊಂಡಿಲ್ಲ.