ನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿ 'ಕ್ರೀಡಾ ಕೋಟಾ'ವನ್ನು ಇರಿಸಿರುವ ಉದ್ದೇಶವೇ ಶಿಕ್ಷಣ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಅಂತಿಮವಾಗಿ ದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದಾಗಿದೆ. ಶೈಕ್ಷಣಿಕ ಅರ್ಹತೆಗೆ ಅವಕಾಶ ಮಾಡಿಕೊಡುವ ಉದ್ದೇಶ ಈ ಕೋಟಾಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿ 'ಕ್ರೀಡಾ ಕೋಟಾ'ವನ್ನು ಇರಿಸಿರುವ ಉದ್ದೇಶವೇ ಶಿಕ್ಷಣ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಅಂತಿಮವಾಗಿ ದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದಾಗಿದೆ. ಶೈಕ್ಷಣಿಕ ಅರ್ಹತೆಗೆ ಅವಕಾಶ ಮಾಡಿಕೊಡುವ ಉದ್ದೇಶ ಈ ಕೋಟಾಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಂಚಾಬ್‌ನ ಚಂಡೀಗಢದ ಪಿಇಸಿ ತಾಂತ್ರಿಕ ವಿ.ವಿಯಲ್ಲಿ ನೀಡಲಾಗಿರುವ ಶೇ 2ರಷ್ಟು ಕ್ರೀಡಾ ಕೋಟದ ಅಡಿ ಪ್ರವೇಶಾತಿ ಪಡೆಯಲು ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಶೇ 75 ಅಂಕ ಕಡ್ಡಾಯವಾಗಿ ಗಳಿಸಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಈ ನಿಯಮದ ವಿರುದ್ಧ ಕೆಲವರು ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈಚೆಗೆ ವಜಾಗೊಳಿಸಿತ್ತು. ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ.
ಶೇ 75 ಅಂಕಗಳನ್ನು ಕಡ್ಡಾಯಗೊಳಿಸುವುದು ಕ್ರೀಡಾ ಕೋಟಾವನ್ನು ಪರಿಚಯಿಸಿರುವ ಉದ್ದೇಶವನ್ನು ಉತ್ತೇಜಿಸುವುದಿಲ್ಲ, ಬದಲಾಗಿ ಅದಕ್ಕೆ ಮಾರಕವಾಗಿದೆ. ಅಲ್ಲದೇ, ಈ ಮಾನದಂಡವು ತಾರತಮ್ಯದಿಂದ ಕೂಡಿದೆ. ಹೀಗಾಗಿ ಇದು ಸಂವಿಧಾನದ 14ನೇ ವಿಧಿ ನೀಡುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ವಿಶ್ವವಿದ್ಯಾಲಯಗಳು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಪೋಷಿಸುವ ಕೇಂದ್ರಗಳು. ಶಿಕ್ಷಣ ಸಂಸ್ಥೆಗಳು ಪ್ರವೇಶಾತಿ ದೃಷ್ಟಿಯಿಂದ ಕನಿಷ್ಠ ಅರ್ಹತಾ ಮಾನದಂಡವನ್ನು ನಿಗದಿಪಡಿಸಬಹುದು. ಆದರೆ ಆ ಮಾನದಂಡಗಳು ಸಾಮಾನ್ಯ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಅನ್ವಯಿಸುವಂಥ ಮಾನದಂಡಗಳಾಗಿರಬಾರದು ಎಂದು ಕೋರ್ಟ್ ಹೇಳಿದೆ.
ವಿ.ವಿಗಳು ಅಥವಾ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು 2023ರ ಕ್ರೀಡಾ ನೀತಿ ನಿಗದಿಪಡಿಸಿರುವ ಅರ್ಹತಾ ಮಾನದಂಡಕ್ಕಿಂತ ಹೆಚ್ಚು ಉನ್ನತವಾಗಿರುತ್ತವೆ. ಹಾಗಾಗಿ ಕ್ರೀಡಾ ಕೋಟಾದಡಿ ಅದನ್ನು ಪರಿಗಣಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.