ದೆಹಲಿ: 69ನೇ ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿ ಗುರುವಾರ ಪ್ರಕಟವಾಗಿದ್ದು, ಪುಷ್ಪ ಚಿತ್ರದಲ್ಲಿನ ನಟನೆಗಾಗಿ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
ದೆಹಲಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಗಂಗೂಬಾಯಿ ಸಿನಿಮಾದಲ್ಲಿನ ನಟನೆಗಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಮಿಮಿ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಕೃತಿ ಸನಾನ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಆರ್. ಮಾಧವನ್ ಅಭಿನಯದ ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಒಲಿದಿದೆ.
ಇನ್ನು ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ಕಿರಣ್ ರಾಜ್ ನಿರ್ದೇಶನದ ‘ಚಾರ್ಲಿ 777’ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಪಡೆದುಕೊಂಡಿದೆ.
ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ.
‘ದಿ ಕಾಶ್ಮೀರ್ ಫೈಲ್ಸ್’ ಅತ್ಯುತ್ತಮ ಭಾವೈಕ್ಯತೆಯ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇತ್ತ ರಾಜ್ಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾವು ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.