ಐಜ್ವಾಲ: ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎನ್ನುವ ಮಾತಿಗೆ ಮಿಜೋರಾಂ ಮೂಲದ ವೃದ್ಧ ತಾಜಾ ಉದಾಹರಣೆಯಾಗಿದ್ದಾರೆ. ಏಕೆಂದರೆ, 78ನೇ ಇಳಿ ವಯಸ್ಸಿನಲ್ಲೂ 9ನೇ ತಗರತಿಗೆ ಸೇರಿರುವ ವೃದ್ಧ, ಪ್ರತಿದಿನ 3 ಕಿ.ಮೀ ನಡೆದುಕೊಂಡು ಶಾಲೆಗೆ ತಲುಪಿ ಕಲಿಕೆಯತ್ತ ಗಮನ ಹರಿಸಿದ್ದಾರೆ.
ಇತರರಿಗೆ ಮಾದರಿ
ಯೂನಿಫಾರ್ಮ್ ಧರಿಸಿ, ಬ್ಯಾಗ್ ತುಂಬ ಪುಸ್ತಕಗಳನ್ನು ತುಂಬಿಕೊಂಡು ಸಾಮಾನ್ಯ ಮಕ್ಕಳಂತೆ ನಿತ್ಯವೂ ತರಗತಿಗೆ ಹಾಜರಾಗುತ್ತಿದ್ದಾರೆ. ಅಂದಹಾಗೆ ವೃದ್ಧನ ಹೆಸರು ಲಾಲ್ರಿಂಗ್ಥಾರ. ಇವರು ಚಂಪಾಯಿ ಜಿಲ್ಲೆಯ ಹ್ರುಯಿಕಾನ್ ಗ್ರಾಮದ ನಿವಾಸಿ. ಇಳಿವಯಸ್ಸಲ್ಲಿ ಕಲಿಕೆಯ ಮೇಲೆ ಗಮನ ಹರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಂದೆಯ ಸಾವು ಬಳಿಕ ಕಲಿಕೆಗೆ ಬ್ರೇಕ್
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಹ್ರುಯಿಕಾನ್ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್‌ಎಂಎಸ್‌ಎ) ಪ್ರೌಢಶಾಲೆಯಲ್ಲಿ 9 ನೇ ತರಗತಿಗೆ ದಾಖಲಾಗಿದ್ದಾರೆ. ಇವರು 1945ರಲ್ಲಿ ಇಂಡೋ-ಮಯನ್ಮಾರ್ ಗಡಿಯಲ್ಲಿರುವ ಖುವಾಂಗ್ಲೆಂಗ್ ಗ್ರಾಮದಲ್ಲಿ ಜನಿಸಿದರು. ತಂದೆಯ ಸಾವಿನ ಬಳಿಕ ಲಾಲ್ರಿಂಗ್ಥಾರ ಅವರಿಗೆ ಓದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಎರಡನೇ ತರಗತಿಯಲ್ಲೇ ಶಾಲೆಯನ್ನು ಮೊಟಕುಗೊಳಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ತಾಯಿಗೆ ಜಮೀನು ಕೆಲಸದಲ್ಲಿ ಸಹಾಯ ಮಾಡಲು ಆರಂಭಿಸಿದರು. ಒಬ್ಬನೇ ಮಗನಾದ್ದರಿಂದ ತಾಯಿಯ ಬದುಕಿಗೆ ಆಸರೆಯಾಗಿದ್ದರು.
ಬಡತನವೇ ಶಾಪ
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದರು. ಅಂತಿಮವಾಗಿ 1995ರಲ್ಲಿ ಹ್ರುಯಿಕಾನ್ ಗ್ರಾಮದಲ್ಲಿ ನೆಲೆ ನಿಂತರು. ಸ್ಥಳೀಯ ಚರ್ಚ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸಲು ಕೊಂಚ ಹಣ ಸಂಪಾದನೆ ಮಾಡುತ್ತಿದ್ದರು. ಅತಿಯಾದ ಬಡತನವೇ ಕಲಿಕೆಯಿಂದ ದೂರ ಉಳಿಯಲು ಕಾರಣವಾಯಿತು.
ಇಂಗ್ಲಿಷ್ ಸ್ಕಿಲ್ ಸುಧಾರಿಸುವ ಉದ್ದೇಶ
ಇಂಗ್ಲಿಷ್ ಸ್ಕಿಲ್ ಅನ್ನು ಸುಧಾರಿಸಿಕೊಳ್ಳಬೇಕೆಂಬ ಬಯಕೆಯಿಂದ ಮತ್ತೆ ಶಾಲೆಗೆ ಹಿಂದಿರುಗಲು ಲಾಲ್ರಿಂಗ್ಥಾರ ನಿರ್ಧರಿಸಿದರು. ಇಂಗ್ಲಿಷ್ನಲ್ಲಿ ಅರ್ಜಿಯನ್ನು ತುಂಬಬೇಕು ಮತ್ತು ಟಿವಿ ಮಾಧ್ಯಮಗಳಲ್ಲಿನ ಇಂಗ್ಲಿಷ್ ನ್ಯೂಸ್ ಅರ್ಥ ಮಾಡಿಕೊಳ್ಳುವಷ್ಟು ಇಂಗ್ಲಿಷ್ ತಿಳಿದುಕೊಳ್ಳಬೇಕು ಎಂಬುದೇ ಈ ವೃದ್ಧನ ಗುರಿಯಾಗಿದೆ. ಮಿಜೋ ಭಾಷೆಯನ್ನು ಹರಳು ಹುರಿದಂತೆ ಮಾತನಾಡುವ ಲಾಲ್ರಿಂಗ್ಥಾರ ಅಕ್ಷರಸ್ಥ ವ್ಯಕ್ತಿ. ಕಲಿಯುವ ಹಂಬಲ ಇರುವಂತಹ ವ್ಯಕ್ತಿ. ಈಗಲೂ ಅದೇ ಚರ್ಚ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮಿಜೋ ಭಾಷೆ ಓದಲು ಮತ್ತು ಬರೆಯುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಇಂಗ್ಲಿಷ್ ಕಲಿಯಬೇಕೆಂಬುದೇ ನನ್ನ ಗುರಿಯಾಗಿದೆ. ಇಂದು ಪ್ರತಿಯೊಂದರಲ್ಲೂ ಇಂಗ್ಲಿಷ್ ಅಡಕವಾಗಿರುತ್ತದೆ. ಹೀಗಾಗಿ ಇಂಗ್ಲಿಷ್ ಸುಧಾರಿಸಿಕೊಳ್ಳಲು ಶಾಲೆಗೆ ಮರಳುವ ನಿರ್ಧಾರ ಮಾಡಿದೆ ಎಂದು ಲಾಲ್ರಿಂಗ್ಥಾರ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹ್ರುಯಿಕಾನ್ ಮಿಡಲ್ ಸ್ಕೂಲ್‌ನ ಪ್ರಭಾರ ಮುಖ್ಯೋಪಾಧ್ಯಾಯರಾ ವನ್‌ಲಾಲ್ಕಿಮಾ, ಲಾಲ್ರಿಂಗ್ಥರ ಅವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸ್ಫೂರ್ತಿಯಾಗಿದ್ದಾರೆ. ಕಲಿಕೆಯ ಉತ್ಸಾಹವನ್ನು ಹೊಂದಿರುವ ಲಾಲ್ರಿಂಗ್ಥರ ಅವರು ಪ್ರಶಂಸೆಗೆ ಮತ್ತು ಎಲ್ಲರ ಬೆಂಬಲಕ್ಕೂ ಅರ್ಹರು ಎಂದು ಹೇಳಿದ್ದಾರೆ.