ಪಾಲಕ್ಕಾಡ್: ಎಂಬತ್ತು ವರ್ಷದ ವೃದ್ಧೆ ಮೇಲೆ ಪೋಲೀಸರ ದೌರ್ಜನ್ಯ ಬೆಳಕಿಗೆ ಬಂದಿದೆ. ಮಾರುವೇಷದಲ್ಲಿ ಪಾಲಕ್ಕಾಡ್ ಪೋಲೀಸರಿಂದ ಬಂಧಿಸಲ್ಪಟ್ಟ ಎಂಬತ್ತು ವರ್ಷದ ಮಹಿಳೆ ನಾಲ್ಕು ವರ್ಷಗಳ ಕಾಲ ನ್ಯಾಯಾಲಯಕ್ಕೆ ಎಡತಾಕುವುದರಲ್ಲಿ ಕಳೆದು ಬಳಿಕ ಹೇಗೋ ಹೊರಬಂದ ಘಟನೆ ನಡೆದಿದೆ.
ಪೋಲೀಸರ ಕಡೆಯಿಂದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಪಾಲಕ್ಕಾಡ್ ಪೋಲೀಸರು ಅತಿಕ್ರಮ ಪ್ರವೇಶ ಪ್ರಕರಣದಲ್ಲಿ 80 ವರ್ಷದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ತಾನು ಆರೋಪಿಯಲ್ಲ ಎಂದು ಹೇಳಿದರೂ ಪೋಲೀಸರು ವೃದ್ದೆಯನ್ನು ಬಂಧಿಸಿದ್ದರು.
ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ, ಪೋಲೀಸರು ಯಾಕೆ ಇಂತಹ ಕೇಸ್ ತೆಗೆದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ವೃದ್ಧೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಆರೋಪಿಯನ್ನು ಗುರುತಿಸಲು ದೂರು ದಾಖಲಿಸಿದ ವ್ಯಕ್ತಿಯನ್ನು ಸಂಪರ್ಕಿಸಲು ಪಾಲಕ್ಕಾಡ್ ಪೋಲೀಸರು ಸಿದ್ಧವಾಗಿಲ್ಲ. ಪೋಲೀಸರು ಸರಿಯಾಗಿ ಮಾಹಿತಿ ಸಂಗ್ರಹಿಸದೆ ಹಾಗೂ ಪ್ರಕರಣದ ತನಿಖೆ ನಡೆಸದ ಕಾರಣ ಇಂತಹ ಗಂಭೀರ ಅವ್ಯವಹಾರ ನಡೆದಿದೆ. ನಿಜವಾದ ಆರೋಪಿ ವಿಳಾಸ ಬದಲಿಸಿದ್ದರಿಂದ ವೃದ್ಧೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸಂಬಂಧಿತ ಘಟನೆ 1998 ರಲ್ಲಿ ನಡೆದಿತ್ತು. ಕಲ್ಲಿಕಾಡ್ ನಿವಾಸಿ ರಾಜಗೋಪಾಲ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕುಟುಂಬ ಸದಸ್ಯರೊಂದಿಗೆ ಸಂಬಂಧ ಬಿರುಕು ಬಿಟ್ಟ ನಂತರ ಭಾರತಿ ರಾಜಗೋಪಾಲ್ ಅವರ ಮನೆಗೆ ನುಗ್ಗಿ ಗಿಡದ ಕುಂಡಗಳು ಸೇರಿದಂತೆ ವಸ್ತುಗಳನ್ನು ನಾಶಪಡಿಸಿದ್ದರು. ನಂತರ ಶಂಕಿತಳನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಭಾರತಿ ಪರಾರಿಯಾಗಿದ್ದರು. ಬದಲಾಗಿ, 2019 ರಲ್ಲಿ, ಪೋಲೀಸರು ಮತ್ತೊಬ್ಬ ಭಾರತಿಯನ್ನು ಬಂಧಿಸಿದರು. ಇದರೊಂದಿಗೆ 80ರ ಹರೆಯದ ಮುಗ್ಧ ಮಹಿಳೆ ಕೋರ್ಟ್ ವರಾಂಡ ಏರಿ ಇಳಿಯಬೇಕಾಯಿತು.ಬಳಿಕ ಇದೀಗ ತಪ್ಪು ಮನವರಿಕೆಯಾಗಿ ವೃದ್ದೆ ಪಾರಾಗಿದ್ದಾರೆ.ಆದರೆ ಇಷ್ಟು ವರ್ಷ ಅನುಭವಿಸಿದ ಮಾನಸಿಕ ಕಿರಿಕಿರಿಗೆ ಏನು ಪರಿಹಾರವೆಂಬುದು ನಿಷ್ಕರ್ಷೆಯಾಗಿಲ್ಲ.