ಬೆಂಗಳೂರು: ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ಪ್ರಗ್ಯಾನ್ ರೋವರ್ 8 ಮೀಟರ್ ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಪ್ರಗ್ಯಾನ್ ರೋವರ್ ನ ಪೇಲೋಡ್ ಸಹ ಕಾರ್ಯನಿರ್ವಹಣೆ ಮಾಡಲು ಪ್ರಾರಂಭಿಸಿದೆ.
ರೋವರ್ ನ ಯೋಜಿತ ಚಟುವಟಿಕೆಗಳನ್ನು ದೃಢೀಕರಿಸಲಾಗಿದೆ. ರೋವರ್ 8 ಮೀಟರ್ ಗಳಷ್ಟು ಕ್ರಮಿಸಿದ್ದು, ಪೇಲೋಡ್ ಗಳಾದ ಎಲ್ಐಬಿಎಸ್ ಹಾಗೂ ಎಪಿಎಕ್ಸ್ ಎಸ್ ಗಳನ್ನೂ ಚಾಲೂ ಮಾಡಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಟ್ವಿಟರ್ ನಲ್ಲಿ ತಿಳಿಸಿದೆ. "ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲಾ ಪೇಲೋಡ್‌ಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಅದು ಹೇಳಿದೆ.
ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ರಾಸಾಯನಿಕ ಸಂಯೋಜನೆಯನ್ನು ಪಡೆಯುವ ಗುರಿಯನ್ನು ಹೊಂದಿದೆ ಮತ್ತು ಚಂದ್ರನ ಮೇಲ್ಮೈಯ ಖನಿಜ ಸಂಯೋಜನೆಯನ್ನು ಅರಿಯುವೆಡೆಗೆ ಕಾರ್ಯನಿರ್ವಹಿಸಲಿದೆ.
ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಚಂದ್ರನ ಲ್ಯಾಂಡಿಂಗ್ ಸೈಟ್ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯ (Mg, Al, Si, K, Ca, Ti, Fe) ಬಗ್ಗೆ ಮಾಹಿತಿ ನೀಡುತ್ತದೆ.