ಇಸ್ಲಾಮಾಬಾದ್: ಪಾಕಿಸ್ತಾನದ 'ನ್ಯಾಷನಲ್ ಅಸೆಂಬ್ಲಿ'ಯನ್ನು (ಸಂಸತ್ತಿನ ಕೆಳಮನೆ) ಅವಧಿ ಮುಗಿಯುವ ಮೂರು ದಿನ ಮೊದಲೇ ಅಂದರೆ, ಆಗಸ್ಟ್ 9ರಂದು ವಿಸರ್ಜಿಸುವುದಾಗಿ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಆಡಳಿತಾರೂಢ ಪಕ್ಷಗಳ ಮುಖಂಡರಿಗೆ ಗುರುವಾರ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಶೆಹಬಾಜ್, ಸಾರ್ವತ್ರಿಕ ಚುನಾವಣೆಗೆ ಸಿದ್ಧವಾಗಲು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರಿಗೆ ತಿಳಿಸಿದರು.
ನ್ಯಾಷನಲ್ ಅಸೆಂಬ್ಲಿ ವಿಸರ್ಜನೆಯ ಪ್ರಸ್ತಾವಕ್ಕೆ ಅಧ್ಯಕ್ಷರ ಅಂಕಿತ ಬಿದ್ದ ತಕ್ಷಣ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ಶೆಹಬಾಜ್ ಹೇಳಿರುವುದಾಗಿ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಆಗಸ್ಟ್ 9ರಂದು ಕೆಳಮನೆಯನ್ನು ವಿಸರ್ಜಿಸುವಂತೆ ಪ್ರಧಾನಿಯವರು ಈಗಾಗಲೇ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಪ್ರಸ್ತಾವನೆ ಕಳುಸಿಕೊಟ್ಟಿದ್ದಾರೆ ಎಂದು 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಅಧ್ಯಕ್ಷರೂ ಆದ ಶೆಹಬಾಜ್, ತಮ್ಮ ಸರ್ಕಾರವು ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜಿಸಲಿದೆ. ಚುನಾವಣಾ ಆಯೋಗವು ಸಂವಿಧಾನಕ್ಕೆ ಅನುಗುಣವಾಗಿ ಸಾರ್ವತ್ರಿಕ ಚುನಾವಣೆ ಘೋಷಿಸಲಿದೆ ಎಂದು ಈಗಾಗಲೇ ಹಲವು ಬಾರಿ ಹೇಳಿಕೆ ನೀಡಿದ್ದಾರೆ.
ಆಗಸ್ಟ್ 12ರಂದು ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಐದು ವರ್ಷಗಳ ಅವಧಿ ಮುಗಿಯಲಿದೆ. ನ್ಯಾಷನಲ್ ಅಸೆಂಬ್ಲಿ ಐದು ವರ್ಷಗಳ ಅವಧಿ ಪೂರ್ಣಗೊಳಿಸಿದರೆ, ಸಂವಿಧಾನದ ಪ್ರಕಾರ 60 ದಿನಗಳಲ್ಲಿ ಚುನಾವಣೆ ನಡೆಸಬೇಕು. ಆದರೆ, ಅವಧಿಗೂ ಮೊದಲೇ ವಿಸರ್ಜನೆಯಾದ ಸಂದರ್ಭದಲ್ಲಿ ಚುನಾವಣೆ ನಡೆಸಲು 90 ದಿನಗಳವರೆಗೂ ಕಾಲಾವಕಾಶ ಇರುತ್ತದೆ.