ನವದೆಹಲಿ: ನೂತನ ರಾಜ್ಯಸಭೆಯ ಸದಸ್ಯರಾಗಿ ವಿದೇಶಾಂಗ ಸಚಿವ ಜೈಶಂಕರ್ ಸೇರಿದಂತೆ 9 ಮಂದಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ ಭವನದಲ್ಲಿರುವ ರಾಜ್ಯಸಭಾ ಸಭಾಂಗಣದಲ್ಲಿ ಸಭಾಪತಿ ಜಗದೀಪ್ ಧನಕರ್ ಪ್ರಮಾಣ ವಚನ ಬೋಧಿಸಿದರು.
ಜೈಶಂಕರ್ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಸಂಸದರಾಗಿ ಇದು ಎರಡನೇ ಅವಧಿಯಾಗಿದೆ. ಅವರು 2019 ರಲ್ಲಿ ಮೊದಲ ಬಾರಿಗೆ ಮೇಲ್ಮನೆಗೆ ಆಯ್ಕೆಯಾಗಿದ್ದರು.
ಜೈಶಂಕರ್ ಅವರಲ್ಲದೆ ಬಿಜೆಪಿ ಪಕ್ಷದಿಂದ ಬಾಬುಭಾಯಿ ಜೆಸಂಗ್‌ಭಾಯ್ ದೇಸಾಯಿ (ಗುಜರಾತ್) ಕೇಸ್ರಿದೇವ್‌ಸಿನ್ಹ್ ದಿಗ್ವಿಜಯ್‌ಸಿನ್ಹ್ ಝಾಲಾ (ಗುಜರಾತ್) ಮತ್ತು ನಾಗೇಂದ್ರ ರೇ (ಪಶ್ಚಿಮ ಬಂಗಾಳ) ಅವರು ಪ್ರಮಾಣ ವಚನ ಸ್ವೀಕರಿಸಿದ ಇತರ ಸದಸ್ಯರಾಗಿದ್ದಾರೆ. ಇನ್ನೂ ಟಿಎಂಸಿಯಿಂದ ಡೆರೆಕ್ ಒಬ್ರಿಯನ್, ಡೋಲಾ ಸೇನ್, ಸುಖೇಂದು ಶೇಖರ್ ರೇ, ಪ್ರಕಾಶ್ ಚಿಕ್ ಬರೈಕ್ ಮತ್ತು ಸಮೀರುಲ್ ಇಸ್ಲಾಂ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ನಾಲ್ವರು ಸದಸ್ಯರು ಬಂಗಾಳಿಯಲ್ಲಿ, ಮೂವರು ಹಿಂದಿಯಲ್ಲಿ ಮತ್ತು ಇಬ್ಬರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ರಾಜ್ಯಸಭಾ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸದನದ ನಾಯಕ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋಡಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.