ನವದೆಹಲಿ: ಭಾರತದಲ್ಲಿ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸರಳಗೊಳಿಸಲು ಮತ್ತು ಒಂದೇ ವೇದಿಕೆಯಡಿ ಎಲ್ಲ ಮಾಹಿತಿ ಒದಗಿಸುವ ಸ್ಟಡಿ ಇನ್ ಇಂಡಿಯಾ (ಎಸ್‌ಐಐ) ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಪೋರ್ಟಲ್ ಅನ್ನು ಬುಧವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ್, 'ನೋಂದಣಿಯಿಂದ ವೀಸಾ ಅನುಮೋದನೆಯವರೆಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಳಕೆದಾರ ಸ್ನೇಹಿ ಅಪ್ಲಿಕೇಶನ್ ಈ ಪೋರ್ಟಲ್‌ನಲ್ಲಿ ಲಭ್ಯವಿದೆ. ಇದು ವಿದೇಶಿ ವಿದ್ಯಾರ್ಥಿಗಳ ಪ್ರಯಾಣ, ಪ್ರವೇಶವನ್ನು ಸಂಪೂರ್ಣ ಸರಳಗೊಳಿಸಲಿದೆ. ಅವರು ಬಯಸಿದ ಸಂಸ್ಥೆಗಳಲ್ಲಿ ಆಯ್ಕೆಯ ಕೋರ್ಸ್‌ಗಳಿಗೆ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯವಾಗಲಿದೆ' ಎಂದು ಹೇಳಿದರು.
'ಈ ಪೋರ್ಟಲ್ ಆರಂಭಿಸಿರುವುದು ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮೂಲಕ ಭಾರತವನ್ನು ಜಾಗತಿಕ ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಬ್ರ್ಯಾಂಡ್‌ನ ಬಲವಾದ ಅಂತರರಾಷ್ಟ್ರೀಯ ಹೆಜ್ಜೆಗುರುತು ಮೂಡಿಸಲು ನಮಗೆ ನೆರವಾಗಲಿದೆ' ಎಂದು ಹೇಳಿದ್ದಾರೆ.
'ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಉಪಸ್ಥಿತಿಯು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ನಮ್ಮ ವಿದ್ಯಾರ್ಥಿಗಳನ್ನು ಜಾಗತೀಕರಣದ ಜಗತ್ತಿಗೆ ಹೆಚ್ಚು ನಿಕಟವಾಗಿ ಬೆಸೆಯುತ್ತದೆ. ಜತೆಗೆ ಜಾಗತಿಕ ಕೆಲಸದ ಬೇಡಿಕೆಗೆ ತಕ್ಕಂತೆ ಸ್ಥಳೀಯ ವಿದ್ಯಾರ್ಥಿಗಳನ್ನೂ ಸಜ್ಜುಗೊಳಿಸುತ್ತದೆ. ಭಾರತೀಯ ದೃಷ್ಟಿಕೋನದಲ್ಲಿ, ವಿದೇಶಿ ವಿದ್ಯಾರ್ಥಿಗಳು ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಮಾಡುವುದರಿಂದ ಅವರ ಸಂಸ್ಕೃತಿ, ಜೀವನ ಪದ್ಧತಿ, ಸಂಪ್ರದಾಯಗಳು ಮತ್ತು ಚಿಂತನೆಯ ಬಗ್ಗೆ ಪರಸ್ಪರ ಉತ್ತಮ ತಿಳಿವಳಿಕೆಯೂ ಉಂಟಾಗುತ್ತದೆ' ಎಂದು ಹೇಳಿದರು.
'ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ರೂಪಿಸಿರುವ ಎಸ್‌ಐಐ ಪೋರ್ಟಲ್ ಭಾರತವನ್ನು ಆದ್ಯತೆಯ ಶೈಕ್ಷಣಿಕ ತಾಣವನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಮೃದ್ಧ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿದೆ' ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿಶ್ವಾಸ ವ್ಯಕ್ತಪಡಿಸಿದರು.