ನವದೆಹಲಿ: ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ ಅನುಮಾನಾಸ್ಪದ ವಹಿವಾಟುಗಳು ಮತ್ತು ಸಂಭಾವ್ಯ ವಂಚನೆಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ (Artificial intelligence) ಮತ್ತು ಯಂತ್ರ ಕಲಿಕೆ (Machine Learning) ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಕೇಂದ್ರವು ರಾಜ್ಯಸಭೆಗೆ ತಿಳಿಸಿದೆ.
ಯೋಜನೆಯ ಅನುಷ್ಠಾನದಲ್ಲಿ ಆರೋಗ್ಯ ರಕ್ಷಣೆ ವಂಚನೆಗಳ ತಡೆಗಟ್ಟುವಿಕೆ ಹಾಗೂ ಪತ್ತೆಗೆ ಈ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಅಲ್ಲದೆ, ಅರ್ಹ ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಖಾತ್ರಿಪಡಿಸಿಕೊಳ್ಳಲು ಇದು ಸಹಾಯಕವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಖಾತೆ ಸಚಿವ ಎಸ್. ಪಿ. ಸಿಂಗ್ ಬಘೇಲ್ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಬಳಸಿಕೊಂಡು ವಂಚನೆ ವಿರೋಧಿ ಕ್ರಮಗಳ ಅಭಿವೃದ್ಧಿ ಹಾಗೂ ನಿಯೋಜನೆಯನ್ನು ಹೇಗೆ ಮಾಡುವುದು ಎಂಬ ಕಾರ್ಯದಲ್ಲಿ ತಂತ್ರಜ್ಞಾನ ಪಾಲುದಾರರು ತೊಡಗಿದ್ದಾರೆ ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ ಯೋಜನೆಯಡಿ 1 ಆಗಸ್ಟ್ 2023ರವರೆಗೆ ಒಟ್ಟು 24.33 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವರು ಮೇಲ್ಮನೆಗೆ ತಿಳಿಸಿದ್ದಾರೆ.