ಇಂಫಾಲ್: ಒಪ್ಪಂದದ ಆಧಾರದ ಮೇಲೆ ಕೇಂದ್ರ ಮತ್ತು ನಾಗಾ ಗುಂಪುಗಳ ನಡುವಿನ ಶಾಂತಿ ಮಾತುಕತೆ ಯಶಸ್ವಿಯಾಗಿ ಮುಕ್ತಾಯಗೊಳಿಸುವಂತೆ ಒತ್ತಾಯಿಸಲು ಮಣಿಪುರದ ನಾಗಾ ಸಮುದಾಯದವರು ಬುಧವಾರ ತಾವು ವಾಸಿಸುವ ಪ್ರದೇಶಗಳಲ್ಲಿ ರ್‍ಯಾಲಿಗಳನ್ನು ನಡೆಸಿದರು.
ಇಂಫಾಲ್: ಒಪ್ಪಂದದ ಆಧಾರದ ಮೇಲೆ ಕೇಂದ್ರ ಮತ್ತು ನಾಗಾ ಗುಂಪುಗಳ ನಡುವಿನ ಶಾಂತಿ ಮಾತುಕತೆ ಯಶಸ್ವಿಯಾಗಿ ಮುಕ್ತಾಯಗೊಳಿಸುವಂತೆ ಒತ್ತಾಯಿಸಲು ಮಣಿಪುರದ ನಾಗಾ ಸಮುದಾಯದವರು ಬುಧವಾರ ತಾವು ವಾಸಿಸುವ ಪ್ರದೇಶಗಳಲ್ಲಿ ರ್‍ಯಾಲಿಗಳನ್ನು ನಡೆಸಿದರು.
ಬೇರೆ ಯಾವುದೇ ಸಮುದಾಯದ ಪ್ರತ್ಯೇಕ ಆಡಳಿತವು ನಾಗಾ ಸಮುದಾಯ ವಾಸಿಸುವ ಪ್ರದೇಶಗಳನ್ನು ಅತಿಕ್ರಮಿಸಬಾರದು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
'ಶಾಂತಿ ಮಾತುಕತೆ ಮುಕ್ತಾಯಗೊಳಿಸಬೇಕು' ಮತ್ತು 'ನಾಗಾ ಪ್ರದೇಶಗಳನ್ನು ವಿಘಟಿಸಬಾರದು' ಎಂಬ ಫಲಕಗಳನ್ನು ಪ್ರದರ್ಶಿಸಿದರು.
ಮಣಿಪುರದ ನಾಗಾ ಬುಡಕಟ್ಟು ಜನಾಂಗದ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ) ನಾಗಾ ಸಮುದಾಯ ವಾಸಿಸುವ ಪ್ರದೇಶಗಳಲ್ಲಿ ರ್‍ಯಾಲಿಗಳಿಗೆ ಕರೆ ನೀಡಿತ್ತು.
ಬಿಗಿ ಭದ್ರತೆಯ ನಡುವೆ ತಮೆಂಗ್ಲಾಂಗ್, ಸೇನಾಪತಿ, ಉಖ್ರುಲ್ ಮತ್ತು ಚಂದೇಲ್ ಜಿಲ್ಲಾ ಕೇಂದ್ರಗಳಲ್ಲಿ ರ್‍ಯಾಲಿಗಳನ್ನು ನಡೆಸಲಾಯಿತು.
ನಾಗಾ ಬುಡಕಟ್ಟು ಜನಾಂಗದ ನೆಲೆಯಾದ ತಮೆಂಗ್ಲಾಂಗ್‌ನ ಜಾಡೋನಾಂಗ್ ಉದ್ಯಾನದಿಂದ ಪ್ರಾರಂಭವಾದ ರ್‍ಯಾಲಿ 3 ಕಿ.ಮೀ.ಗಿಂತ ಹೆಚ್ಚು ಉದ್ದ ಸಾಗುವ ಮೂಲಕ ಅಪೊಲೊ ಮೈದಾನದಲ್ಲಿ ಕೊನೆಗೊಂಡಿತು.
'ನಾವು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ' ಎಂದು ಪ್ರತಿಭಟನಕಾರರಾದ ಆಂಥೋನಿ ಗ್ಯಾಂಗ್ಮೇಯ್ ಸುದ್ದಿಸಂಸ್ಥೆಗೆ ತಿಳಿಸಿದರು.
2015ರ ಆ. 3 ರಂದು ಕೇಂದ್ರ ಮತ್ತು ಎನ್‌ಎಸ್‌ಸಿಎನ್ (ಐಎಂ) ನಡುವೆ ಐತಿಹಾಸಿಕ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಶಾಂತಿ ಪ್ರಕ್ರಿಯೆ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಯುಎನ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.
'ಅಂತಿಮ ಒಪ್ಪಂದಕ್ಕೆ ಸಹಿ ಹಾಕುವಲ್ಲಿನ ವಿಳಂಬವು ಕಳವಳಕ್ಕೆ ಕಾರಣವಾಗಿದೆ ಮತ್ತು ಶಾಂತಿ ಮಾತುಕತೆ ಹಳಿ ತಪ್ಪಿಸುವ ಸಾಧ್ಯತೆ' ಎಂದು ಆತಂಕ ವ್ಯಕ್ತಪಡಿಸಿದೆ.