ಕಾಸರಗೋಡು: ರಸ್ತೆ ಬದಿ ನಿಲುಗಡೆಗೊಳಿಸುತ್ತಿದ್ದ ವಾಹನಗಳಿಂದ ಬ್ಯಾಟರಿ ಕಳವುಗೈಯುವ ತಂಡದ ಇಬ್ಬರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಟ್ಟತ್ತೋಡಿ ನಾಯಮರ್‍ಮೂಲೆ ಮಿನಿ ಸ್ಟೇಡಿಯಂ ಸನಿಹದ ನಿವಾಸಿ ಮಿರ್ಶಾದ್ ಎನ್.ಎಂ(36) ಹಾಗೂ ಮುಟ್ಟತ್ತೋಡಿ ರಹಮಾನಿಯ ನಗರದ ನಿವಾಸಿ ಮಹಮ್ಮದ್ ಜಾಶಿರ್ ಟಿ.ಎಂ(33)ಬಂಧಿತರು.
ವರ್ಕಾಡಿ ಮೆಟಲ್ಸ್ ಸಂಸ್ಥೆಗೆ ಸಾಮಗ್ರಿ ಸಾಗಿಸುವ ಆಲಂಪಾಡಿ ನಿವಾಸಿ ಹಂಸ ಎಂಬವರ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿದೆ. ವಿದ್ಯಾನಗರದ ವರ್ಕ್‍ಶಾಪ್ ಒಂದರ ಬಳಿ ನಿಲ್ಲಿಸಲಾಗಿದ್ದ ಮೂರು ಲಾರಿಗಳಿಂದ ಬ್ಯಾಟರಿಗಳನ್ನು ಕಳವುಗೈದಿರುವುದಾಗಿ ಹಂಸ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹತ್ತಕ್ಕೂ ಹೆಚ್ಚು ಬ್ಯಾಟರಿಗಳನ್ನು ತಂಡ ಕಳವುಗೈದಿದ್ದು, ಕಳವುಗೈದ ಬ್ಯಾಟರಿಗಳನ್ನು ಕಾಸರಗೋಡಿನ ವಿವಿಧೆಡೆ ಮಾರಾಟ ಮಾಡಿದ್ದಾರೆ. ಈ ರೀತಿ ಮಾರಾಟ ಮಾಡುವ ಸಂದರ್ಭ ಒಂದು ಅಂಗಡಿಯ ಮಾಲಿಕ ಆಧಾರ್‍ಕಾರ್ಡಿನ ಪ್ರತಿಯನ್ನು ಆರೋಪಿಯಿಂದ ಪಡೆದುಕೊಂಡಿದ್ದು, ತನಿಖೆ ವೇಳೆ ಪೊಲೀಸರು ಇದನ್ನೂ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಂಚಾರಕ್ಕೆ ಬಳಸಿದ್ದ ಸ್ಕೂಟರ್ ವಶಕ್ಕೆ ತೆಗೆದುಕೊಂಡಿದ್ದು, ಇದು ಬಂಟ್ವಾಳ ನಗರದಿಂದ ಕಳವುಗೈದಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಸ್ಕೂಟರ್ ಕಳವಾಗಿರುವ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರು ಮಾರಾಟ ಮಾಡಿರುವ ಬ್ಯಾಟರಿಗಳಲ್ಲಿ ಎಂಟನ್ನು ವಶಪಡಿಸಿಕೊಂಡಿದ್ದಾರೆ.