ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾಲ್ನಡಿಗೆ ಮೂಲಕ ತೆರಳುವ ಮಾರ್ಗದಲ್ಲಿ ಮೂರನೇ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ತಿರುಮಲಕ್ಕೆ ಹೋಗುವ ದಾರಿಯಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಈ ಹಿಂದೆ ಎರಡು ಚಿರತೆಗಳನ್ನು ಸೆರೆಹಿಡಿಯಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಮಕ್ಕಳ ಮೇಲೆ ಎರಡು ಚಿರತೆಗಳು ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಬಾಲಕನ ಮೇಲೆ ದಾಳಿ ನಡೆಸಿದ ಚಿರತೆಯನ್ನು ಈ ಹಿಂದೆ ಸೆರೆಹಿಡಿಯಲಾಗಿತ್ತು. ಇದೀಗ ಆದಾದ ಮೂರು ದಿನಗಳ ನಂತರ ಮೂರನೇ ಚಿರತೆಯನ್ನು ಸೆರೆಹಿಡಿಯಲಾಗಿದೆ.
'ನಾವು ಮೂರನೇ ಚಿರತೆಯನ್ನು ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಸೆರೆಹಿಡಿದಿದ್ದೇವೆ. ಅದೇ ಸ್ಥಳದಲ್ಲಿ ಎರಡನೇ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಸುಮಾರು ಐದು ವರ್ಷದ ಗಂಡು ಚಿರತೆ ಇದಾಗಿದೆ ಎಂದು ತಿರುಪತಿ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಎ ಶ್ರೀನಿವಾಸುಲು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಈಗ ಸೆರೆಹಿಡಿದಿರುವ ಚಿರತೆಯನ್ನು ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ (ತಿರುಪತಿ ಮೃಗಾಲಯ) 10 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಮತ್ತು ಮಾನವ ಮಾಂಸವನ್ನು ಸೇವಿಸಿದೆಯೇ ಎಂದು ಪರಿಶೀಲಿಸಲು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಈಮಧ್ಯೆ, ಎರಡನೇ ಚಿರತೆಯ ಡಿಎನ್‌ಎ ವಿಶ್ಲೇಷಣೆಯ ವರದಿಗಾಗಿ ಇಲಾಖೆ ಇನ್ನೂ ಕಾಯುತ್ತಿದೆ. ಎರಡೂ ಚಿರತೆಗಳ ಡಿಎನ್ಎ ವಿಶ್ಲೇಷಣೆಯ ವರದಿಯನ್ನು ಪರಿಶೀಲಿಸಿದರೆ ಇತ್ತೀಚೆಗೆ ಅಪ್ರಾಪ್ತ ಬಾಲಕಿ ಮೇಲೆ ಯಾವ ಚಿರತೆ ದಾಳಿ ಮಾಡಿದೆ ಎಂಬುದು ಖಚಿತವಾಗಲಿದೆ ಎಂದು ಅವರು ಹೇಳಿದರು.
ತಿರುಮಲಕ್ಕೆ ಹೋಗುವ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆಗಳ ಚಲನವಲನದ ಇಲಾಖೆ ನಿಗಾವಹಿಸಲಾಗುವುದು ಎಂದು ಶ್ರೀನಿವಾಸಲು ಹೇಳಿದರು.
ಬಾಲಕನ ಮೇಲೆ ದಾಳಿ ನಡೆಸಿದ ನಂತರ ಸೆರೆ ಸಿಕ್ಕ ಮೊದಲ ಚಿರತೆಯನ್ನು ಸುಮಾರು 40 ಕಿಮೀ ದೂರದ ಬಾಕರಾಪೇಟದಲ್ಲಿ ಬಿಡಲಾಗಿದೆ.