ತಿರುವನಂತಪುರಂ: ಕಣ್ಣೂರು ವಿಶ್ವವಿದ್ಯಾನಿಲಯದ ನೂತನ ಪಿಜಿ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸಿಪಿಎಂ ನಾಯಕಿ ಹಾಗೂ ಮಟ್ಟನ್ನೂರು ಶಾಸಕಿ ಕೆ.ಕೆ.ಶೈಲಜಾ ಅವರ ಆತ್ಮಕಥೆಯನ್ನು ಪಠ್ಯವಾಗಿ ಸೇರ್ಪಡೆಗೊಳಿಸಲಾಗಿದೆ.
ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಪಿಜಿ ಎಂಎ ಇಂಗ್ಲೀಷ್ ಕೋರ್ಸ್‍ನಲ್ಲಿ ಕೆ.ಕೆ.ಶೈಲಜಾ ಅವರ ಆತ್ಮಕಥೆಯನ್ನು ಸೇರಿಸಲಾಗಿದೆ. ‘ಮೈ ಲೈಫ್ ಆಸ್ ಎ ಕಾಮ್ರೇಡ್’ ಎಂಬ ಆತ್ಮಕಥೆಯನ್ನು ಪಠ್ಯದಲ್ಲಿ ಸೇರಿಸಲಾಗಿದೆ.
ರಾಜ್ಯಪಾಲರ ಅನುಮತಿಯಿಲ್ಲದೆ ಉಪಕುಲಪತಿ ಗೋಪಿನಾಥ್ ರವೀಂದ್ರನ್ ಅವರು ರಚಿಸಿದ್ದ ಬೋರ್ಡ್ ಆಫ್ ಸ್ಟಡೀಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿತ್ತು. ಆದ್ದರಿಂದ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಸದ್ಯಕ್ಕೆ ಯಾವುದೇ ಅಧ್ಯಯನ ಮಂಡಳಿ ಇಲ್ಲ. ವಿಸಿ ಅಡಿಯಲ್ಲಿ ರಚಿಸಲಾದ ತಾತ್ಕಾಲಿಕ ಸಮಿತಿಯು ಗಾಂಧೀಜಿ, ಬಿಆರ್ ಅಂಬೇಡ್ಕರ್ ಮತ್ತು ನೆಲ್ಸನ್ ಮಂಡೇಲಾ ಅವರೊಂದಿಗೆ ಕೆ.ಕೆ.ಶೈಲಜಾ ಅವರ ಆತ್ಮಚರಿತ್ರೆಯನ್ನು ಪಠ್ಯಕ್ರಮದಲ್ಲಿ ಸೇರಿಸಿದೆ.
ಈ ಹಿಂದೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ವಿದ್ಯಾರ್ಥಿಯಾಗಿದ್ದ ಎಸ್‍ಎಫ್‍ಐ ಮುಖಂಡರೊಬ್ಬರಿಗೆ ಕಣ್ಣೂರು ವಿಶ್ವವಿದ್ಯಾನಿಲಯವು ಕಾನೂನುಬಾಹಿರವಾಗಿ ಎಂಎ ಇಂಗ್ಲಿಷ್ ಗೆ ಪ್ರವೇಶ ನೀಡಲು ನಿಯಮಾವಳಿಗೆ ತಿದ್ದುಪಡಿ ತಂದಿತ್ತು. ವಿಸಿ ಗೋಪಿನಾಥ್ ರವೀಂದ್ರನ್ ರಚಿಸಿದ್ದ ಸಮಿತಿ ಇದೀಗ ಮಾಜಿ ಸಚಿವರ ಆತ್ಮಕಥೆಯನ್ನು ಅಧ್ಯಯನ ವಿಷಯವನ್ನಾಗಿ ಮಾಡಿದೆ.
ಕೋವಿಡ್ ಸಮಯದಲ್ಲಿ ಪಿ. ಪಿ. ಇ-ಕಿಟ್ ಹಗರಣದಲ್ಲಿ ತನಿಖೆಗೆ ಒಳಗಾಗಿರುವ ಮಾಜಿ ಸಚಿವರ ಆತ್ಮಕಥನವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ವಿಶ್ವವಿದ್ಯಾಲಯಗಳನ್ನು ನಿರುತ್ಸಾಹಗೊಳಿಸಿದೆ ಎಂಬ ಆರೋಪವೂ ಕೇಳಿಬಂದಿದೆ.