HEALTH TIPS

ಆರೋಪ ಪಟ್ಟಿಗೆ ನ್ಯಾಯಾಲಯದ ಭಾಷೆ ಅನ್ವಯಿಸಲ್ಲ: ಸುಪ್ರೀಂ ಕೋರ್ಟ್

           ವದೆಹಲಿ: ನ್ಯಾಯಾಲಯಗಳಲ್ಲಿ ಬಳಸುವ ಭಾಷೆಯಲ್ಲಿಯೇ ತನಿಖಾ ಏಜೆನ್ಸಿಯು ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಬೇಕು ಎಂಬ ಬಗ್ಗೆ ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ ಎಂದು ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ.

                'ವ್ಯಾಪಂ' ಹಗರಣದಲ್ಲಿ ಭಾಗಿಯಾದ ಇಬ್ಬರು ಆರೋ‍ಪಿಗಳು ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯು ಇಂಗ್ಲಿಷ್‌ನಲ್ಲಿದೆ.

                ಇದು ನಮಗೆ ಅರ್ಥವಾಗುವುದಿಲ್ಲ. ಹಾಗಾಗಿ, ಹಿಂದಿ ಭಾಷೆಯಲ್ಲಿ ಒದಗಿಸಬೇಕು ಎಂದು ಮಧ್ಯಪ್ರದೇಶದ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.

               ಇದಕ್ಕೆ ಅನುಮತಿ ನೀಡಿದ್ದ ಹೈಕೋರ್ಟ್‌ ಆದೇಶವನ್ನು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಓಕಾ ಹಾಗೂ ರಾಜೇಶ್‌ ಬಿಂದಾಲ್‌ ಅವರಿದ್ದ ವಿಭಾಗೀಯ ನ್ಯಾಯ‍ಪೀಠವು ವಜಾಗೊಳಿಸಿದೆ.

 ‌            ಈ ಸಂಬಂಧ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಪೀಠವು, ಕೋರ್ಟ್‌ನಲ್ಲಿ ಬಳಸುವ ಭಾಷೆ ಬಗ್ಗೆ ಸಿಆರ್‌ಪಿಸಿ ಸೆಕ್ಷನ್‌ 272ರಲ್ಲಿ ಹೇಳಲಾಗಿದೆ. ಇದರ ಅನ್ವಯ ರಾಜ್ಯದಲ್ಲಿರುವ ಕೋರ್ಟ್‌ಗಳಲ್ಲಿ ಯಾವ ಭಾಷೆ ಬಳಸಬೇಕು ಎಂಬುದನ್ನು ನಿರ್ಧಿಸಿರುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಆದರೆ, ಇದು ಹೈಕೋರ್ಟ್‌ಗೆ ಅನ್ವಯಿಸುವುದಿಲ್ಲ. ಜೊತೆಗೆ, ತನಿಖಾ ಏಜೆನ್ಸಿ ಅಥವಾ ತನಿಖಾಧಿಕಾರಿಗೆ ಅಂತಿಮ ವರದಿಯನ್ನು ಇಂತಹದ್ದೇ ಭಾಷೆಯಲ್ಲಿ ಇರಬೇಕೆಂದು ಸೂಚಿಸುವ ಅಧಿಕಾರವೂ ಇಲ್ಲ' ಎಂದು ಸ್ಪಷ್ಟಪಡಿಸಿತು.

                 'ಸೆಕ್ಷನ್‌ 173ರಲ್ಲಿ ತನಿಖಾಧಿಕಾರಿಯು ಅಂತಿಮ ವರದಿ/ ಆರೋಪ ಪಟ್ಟಿ ಸಲ್ಲಿಸುವ ಬಗ್ಗೆ ವಿವರಿಸಲಾಗಿದೆ. ಆದರೆ, ತನಿಖಾ ಏಜೆನ್ಸಿ/ ತನಿಖಾಧಿಕಾರಿಯು ನ್ಯಾಯಾಲಯದಲ್ಲಿ ಬಳಸುವ ಭಾಷೆಯಲ್ಲಿಯೇ ಸಲ್ಲಿಸಬೇಕು ಎಂದು ಹೇಳುವುದಿಲ್ಲ. ಒಂದು ವೇಳೆ ವರದಿಯು ನ್ಯಾಯಾಲಯದಲ್ಲಿ ಬಳಸುವ ಭಾಷೆಯಲ್ಲಿ ಇಲ್ಲದಿದ್ದರೂ ಅದರಿಂದ ನ್ಯಾಯಿಕ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ' ಎಂದು ಹೇಳಿತು.

              ಸೆಕ್ಷನ್‌ 207ರ ಅಡಿ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರು ಸಂಬಂಧಪಟ್ಟ ಆರೋಪಿಗೆ ಆರೋಪ ಪಟ್ಟಿ ಸೇರಿದಂತೆ ಇತರೇ ಅಗತ್ಯ ದಾಖಲೆಗಳನ್ನು ನೀಡುವಂತೆ ಸೂಚಿಸುವ ಹಕ್ಕು ಬಾಧ್ಯತೆ ಹೊಂದಿರುತ್ತಾರೆ ಎಂದು ತಿಳಿಸಿತು.

                ಆರೋಪಿಗಳಿಗೆ ಅವರ ವಕೀಲರು ಆರೋಪ ಪಟ್ಟಿ ಬಗ್ಗೆ ಮನವರಿಕೆ ಮಾಡಿಕೊಟ್ಟಿರುತ್ತಾರೆ. ಹಾಗಾಗಿ, ಅದನ್ನು ಭಾಷಾಂತರಿಸಿ ಕೊಡುವ ಪ್ರಮೇಯ ಎದುರಾಗುವುದಿಲ್ಲ. ಒಂದು ವೇಳೆ ಪಿರ್ಯಾದಿದಾರರು ಹಾಗೂ ಅವರ ಪರ ವಕೀಲರ ನಡುವೆ ಯಾವ ಭಾಷೆಯಲ್ಲಿ ಇದನ್ನು ಸಲ್ಲಿಸಲಾಗಿದೆ ಎಂಬ ಬಗ್ಗೆ ಸಂಭಾಷಣೆ ನಡೆದಿಲ್ಲದಿದ್ದಾಗ ಮಾತ್ರವಷ್ಟೇ ಭಾಷಾಂತರದ ಪ್ರತಿ ಒದಗಿಸುವ ಪ್ರಶ್ನೆ ಎದುರಾಗುತ್ತದೆ ಎಂದಿತು.

                  'ತನ್ನ ವಿರುದ್ಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ಬಗ್ಗೆ ತಿಳಿದುಕೊಳ್ಳುವುದು ಪಿರ್ಯಾದಿಯ ಹಕ್ಕಾಗಿದೆ. ಸಂವಿಧಾನದ 21ನೇ ವಿಧಿಯ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಸಾರವೂ ಇದೇ ಆಗಿದೆ. ಆದರೆ, ಆರೋಪ ಪಟ್ಟಿಯ ಭಾಷಾಂತರಕ್ಕೆ ಹಲವು ತಂತ್ರಾಂಶಗಳು ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಬಹುದು' ಎಂದು ಹೇಳಿತು.

                ಎನ್‌ಐಎ ಹಾಗೂ ಸಿಬಿಐ ಗಂಭೀರ ಅಪರಾಧಗಳ ಬಗ್ಗೆ ತನಿಖೆ ನಡೆಸುತ್ತವೆ. ದೇಶದ ಹಲವೆಡೆ ಇವುಗಳ ಶಾಖೆಗಳಿವೆ. ಹಾಗಾಗಿ, ಇಂತಹ ಏಜೆನ್ಸಿಗಳು ಪ್ರಕರಣದ ಅಂತಿಮ ವರದಿಯನ್ನು ಸಂಬಂಧಪಟ್ಟ ಕೋರ್ಟ್‌ನಲ್ಲಿ ಬಳಸುವ ಭಾಷೆಯಲ್ಲಿಯೇ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿತು.

                 2013ರಲ್ಲಿ ಮಧ್ಯಪ್ರದೇಶದ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಮತ್ತು ನೇಮಕಾತಿ ಹಗರಣ ಬಯಲಿಗೆ ಬಂದಿತ್ತು. 2015ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಸಿಬಿಐ ತನಿಖೆ ಆರಂಭಿಸಿದೆ. ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಉದ್ಯಮಿಗಳು ಇದರಲ್ಲಿ ಭಾಗಿಯಾಗಿರುವ ಆರೋಪ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries