ಭೂಮಿ ಮೇಲೆ ತಾಯಿಯ ಎದೆ ಹಾಲಿನಂಥ ಅಮೃತ ಮತ್ತೊಂದಿಲ್ಲ. ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತಾಯಿ ಹಾಲು ತುಂಬಾನೇ ಅವಶ್ಯಕ, ಅದರಲ್ಲೂ ಮಗು ಜನಿಸಿದ 6 ತಿಂಗಳವರೆಗೆ ಮಗುವಿಗೆ ಎದೆಹಾಲು ಬಿಟ್ಟರೆ ಬೇರೇನೂ ತಿನ್ನಬಾರದು ಎಂದು ಮಕ್ಕಳತಜ್ಞರು ಹೇಳುತ್ತಾರೆ.
ಹೆರಿಗೆಯಾದ ಮೊದಲ ಒಂದು ಗಂಟೆಯೊಳಗೆ ಎದೆಹಾಲುಣಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಆದರೆ ಹೆರಿಗೆಯಾದ ತಕ್ಷಣ ಮಗುವಿಗೆ ಎದೆಹಾಲುಣಿಸಲು ಬಹುತೇಕ ತಾಯಂದಿರಿಗೆ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಮನೆಯವರ ಅಥವಾ ಆಸ್ಪತ್ರೆಯವರ ಸಹಕಾರ ಬೇಕಾಗುತ್ತದೆ.ಹೆರಿಗೆಯಾದ ತಕ್ಷಣ ಮಗುವಿನ ಆರೋಗ್ಯಕ್ಕಾಗಿ ಏನೆಲ್ಲಾ ಮಾಡಬೇಕು? ಈ ಸಮಯದಲ್ಲಿ ಬಾಣಂತಿಯರಿಗೆ ಎದುರಾಗುವ ಸವಾಲುಗಳೇನು ಎಂದು ನೋಡೋಣ ಬನ್ನಿ:
ಹೆರಿಗೆಯಾದ ತಕ್ಷಣ ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ ಮಾಡಬೇಕು
ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಬಳಿ ಮಗುವನ್ನು ತಂದು ತಾಯಿ ಮೈಗೆ ತಾಗುವಂತೆ ಮಗುವನ್ನು ಹಿಡಿಯಬೇಕು. ಇದನ್ನು ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ ಎಂದು ಹೇಳಲಾಗುವುದು. ತಾಯಿಯಲ್ಲಿನ ಆರೋಗ್ಯಕರ ಬ್ಯಾಕ್ಟಿರಿಯಾ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗಿದೆ. ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ ಮಗುವಿಗೆ ಹೆರಿಗೆಯಾದ ತಕ್ಷಣ ಮಾತ್ರವಲ್ಲ, ಎದೆಹಾಲುಣಿಸುವಷ್ಟು ಸಮಯ ನೀಡಿದರೆ ಒಳ್ಳೆಯದು. ಇದರಿಂದ ತಾಯಿ-ಮಗುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ಅಲ್ಲದೆ ಎದೆಹಾಲಿನ ಉತ್ಪತ್ತಿಗೆ ಸಹಕಾರಿಯಾಗಿದೆ.
ಮಗುವಿಗೆ ಎದೆಹಾಲಿಗಿಂತ ಮುನ್ನ ಬೇರೆ ಏನೂ ಕೊಡುವುದು ಸರಿಯಲ್ಲ
ಕೆಲವಲ್ಲಿ ಸಂಪ್ರದಾಯದ ಹೆಸರಿನಲ್ಲಿ ಮಗು ಜನಿಸಿದಾಗ ಸಕ್ಕರೆ ನೀರು ಕೊಡುತ್ತಾರೆ, ಆದರೆ ಇದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಮಗು ಜನಿಸಿದಾಗ ಎದೆಹಾಲು ಬಿಟ್ಟು ಬೇರೇನೂ ಕೊಡಬಾರದು. ಅಲ್ಲದೆ ಸಿ ಸೆಕ್ಷನ್ ಆದಾಗ ಕೆಲವೊಮ್ಮೆ ಎದ್ದು ಕೂತು ಎದೆಹಾಲುಣಿಸಲು ಕಷ್ಟವಾಗುವುದು ಅಥವಾ ಹೆರಿಗೆಯ ಬಳಿಕ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾದರೆ ತಾಯಿ ಚೇತರಿಸಿಕೊಳ್ಳುವವರಿಗೆ ಎದೆಹಾಲುಣಿಸಲು ಸಾಧ್ಯವಾಗಲ್ಲ. ಆವಾಗ ವೈದ್ಯರು ಫಾರ್ಮುಲಾ ಮಿಲ್ಕ್ ನೀಡಲು ಸೂಚಿಸುತ್ತಾರೆ. ಆದರೆ ಕೆಲವೊಂದು ಆಸ್ಪತ್ರೆಯಲ್ಲಿ ತಾಯಿ ಸ್ವಲ್ಪ ಚೇತರಿಸಿಕೊಳ್ಳುವವರಿಗೆ ಸಿರೆಂಜ್‌ನಿಂದ ಎದೆಹಾಲು ತೆಗೆದು ಮಗುವಿಗೆ ನೀಡಲಾಗುವುದು. ಜನಿಸಿದ ಮಗುವಿಗೆ ಎದೆಹಾಲುಣಿಸುವುದು ತಾಯಿಯ ಪ್ರಮುಖ ಕರ್ತವ್ಯವಾಗಿರುತ್ತೆ.
ಸಿ ಸೆಕ್ಷನ್ ಆದ ತಾಯಿಗೆ ಎದೆಹಾಲುಣಿಸಲು ಮನೆಯವರ ಸಹಾಯ ಬೇಕಾಗುತ್ತೆ
ಸಿ ಸೆಕ್ಷನ್ ಆದವರಿಗೆ ಒಂದೆರಡು ದಿನ ಎದ್ದು ಕೂರುವುದು ಕಷ್ಟವಾಗುವುದು. ಅಲ್ಲದೆ ಮಗುವನ್ನು ಸರಿಯಾಗಿ ಹಿಡಿದುಕೊಳ್ಳಲು ಕೂಡ ಕಷ್ಟವಾಗುವುದು. ಈ ಸಮಯದಲ್ಲಿ ಅವರಿಗೆ ಸಹಾಯಕ್ಕೆ ನಿಲ್ಲಬೇಕಾಗುತ್ತದೆ. ಮಗುವನ್ನು ತಾಯಿ ಬಳಿ ತಂದು ಎದೆ ಬಳಿ ಹಿಡಿದು ನಿಂತರೆ ಎದೆಹಾಲುಣಿಸಲು ಸುಲಭವಾಗಬಹುದು.
ಎದೆ ಹಾಲುಣಿಸುವುದರಿಂದ ತಾಯಿ-ಮಗುವಿಗೆ ದೊರೆಯುವ ಪ್ರಯೋಜನಗಳು
- ಮಗುವಿಗೆ ಪೋಷಕಾಂಶದ ಆಹಾರ ಸಿಗುತ್ತದೆ: ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೌಷ್ಠಿಕಾಂಶವಿರುವ ಎದೆಹಾಲು ಸಹಕಾರಿಯಾಗಿದೆ.
- ಎದೆಹಾಲಿನ ಮೂಲಕ ಆ್ಯಂಟಿಬಾಡಿ ಮಗುವಿಗೆ ದೊರೆಯುತ್ತದೆ: ಇದರಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದು.
- ತಾಯಿಯಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಅತ್ಯಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುತ್ತದ: ಎದೆಹಾಲುಣಿಸುವುದರಿಂದ ತಾಯಿಗೂ ಪ್ರಯೋಜನ ದೊರೆಯಲಿದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಇವುಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.