ಶಬರಿಮಲೆ: ಓಣಂ ಹಬ್ಬದ ಮೊದಲ ದಿನವಾದ ಸೋಮವಾರ ಶಬರಿಮಲೆ ದೇವಸ್ಥಾನದಲ್ಲಿ ನಡೆದ ಓಣಸದ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ 11.30ಕ್ಕೆ ಮೇಲ್ಶಾಂತಿ ಜಯರಾಮನ್ ನಂಬೂದಿರಿಯವರ ಉಪಸ್ಥಿತಿಯಲ್ಲಿ ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಸಾಂಪ್ರದಾಯಿಕ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು.
ವಿಶೇಷ ಆಯುಕ್ತ ಎಂ.ಮನೋಜ್, ಶಬರಿಮಲೆ ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೃಷ್ಣಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿನೋದ್ ಕುಮಾರ್, ಆಡಳಿತಾಧಿಕಾರಿ ಓ.ಜಿ.ವಿ.ಬಿಜು ಉಪಸ್ಥಿತರಿದ್ದರು. ಭಕ್ತಾದಿಗಳ ಉದ್ದನೆಯ ಸರತಿ ಸಾಲು ಕಂಡುಬಂತು. ಆ. 31ರವರೆಗೆ(ನಾಳೆ) ಭಕ್ತರಿಗೆ ಓಣಸದ್ಯ ನೀಡಲಾಗುವುದು.
ದೇವಾಲಯದಲ್ಲಿ ಕಳಾಭಿಷೇಕ ವಿಶೇಷ ಸಹಿತ ಧಾರ್ಮಿಕ ವಿಧಿ ವಿಧಾನ ನಡೆಯಿತು. ವಿಧಿವಿಧಾನದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ದೇವಸ್ಥಾನದ ಮಂಟಪದಲ್ಲಿ ಮೇಲ್ಶಾಂತಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಪೂಜೆ ನೆರವೇರಿತು.
ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶವನ್ನು ಹೊತ್ತ ಮೆರವಣಿಗೆ ಶ್ರೀಸನ್ನಿಧಿಗೆ ಪ್ರದಕ್ಷಿಣೆ ಬಂದು ನಂತರ ಮಧ್ಯಾಹ್ನ ಪೂಜೆಯ ಸಂದರ್ಭ ದೇವರ ವಿಗ್ರಹಕ್ಕೆ ಕಳಭಾಭಿಷೇಕ ದೊಂದಿಗೆ ಧಾರ್ಮಿಕ ವಿಧಿ ಮುಕ್ತಾಯಗೊಂಡಿತು. ಉದಯಾಸ್ತಮಾನ ಪೂಜೆ, ಅಷ್ಟಾಭಿಷೇಕ, ಪುಷ್ಪಾಭಿಷೇಕ ಮತ್ತು ಪಡಿಪೂಜೆ ಇತರ ಆಚರಣೆಗಳು ನಡೆದವು. ನಾಳೆ ರಾತ್ರಿ 10 ಗಂಟೆಗೆ ಅತ್ತಪೂಜೆ ಮತ್ತು ಹರಿವರಾಸವಂ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ.