ಕಾಸರಗೋಡು: ನೀಲೇಶ್ವರ ರೈಲ್ವೆ ನಿಲ್ದಾಣದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಯ ರಕ್ಷಣಾ ಬಲೆಯೊಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಕಾಗೆಯೊಂದನ್ನು ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ರಕ್ಷಿಸಿದ್ದಾರೆ.
ಕಳೆದ ಎರಡು ದಿವಸಗಳಿಂದ ಕಾಗೆ ಈ ರಕ್ಷಣಾಬೇಲಿಯೊಳಗೆ ಸಿಲುಕಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅರಣ್ಯ ಇಲಾಖೆ ಅಧಿಕಾರಿ ಕೆ. ಅಶ್ರಫ್ ಅವರಿಗೆ ತುರ್ತು ಸಂದೇಶ ನೀಡಿ ಕಾಗೆಯನ್ನು ಪಾರುಮಾಡುವಂತೆ ನಿರ್ದೇಶಿಸಿದ್ದರು. ಇದಕ್ಕೆ ರೈಲ್ವೆ ವಿದ್ಯುತ್ ಇಲಾಖೆ ಅಧಿಕಾರಿಗಳೂ ಕೈಜೋಡಿಸಿದರು. ಕಾಞಂಗಾಡಿನ ಅರಣ್ಯ ಇಲಾಖೆಯ ಪ್ರತ್ಯೇಕ ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿ ಕಾಗೆಯನ್ನು ಸುರಕ್ಷಿತವಾಗಿ ಪಾರುಮಾಡಿದ್ದಾರೆ.
ಕಾಗೆ ಸಂರಕ್ಷಿತ ವಿಭಾಗದಲ್ಲಿ ಒಳಪಡುವ ಪಕ್ಷಿಯಲ್ಲ. ಆದರೂ ಸಂಕಷ್ಟದಲ್ಲಿ ಸಇಲುಕಿಕೊಂಡು ಒದ್ದಾಡುತ್ತಿದ್ದ ಕಾಗೆಯ ಜೀವ ಉಳಿಸಲು ಸ್ವಯಂಪ್ರೇರಿತರಾದ ಅರಣ್ಯ ಇಲಾಖೆ ಹಾಗೂ ರೈಲ್ವೆ ಎಲೆಕ್ಟ್ರಿಕ್ ವಿಭಾಗದ ಸಿಬ್ಬಂದಿಯ ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ತಮ್ಮ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.