ಇಸ್ಲಾಮಾಬಾದ್: ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಂಗಳವಾರ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಬಡತನ ಹಾಗೂ ನಿರುದ್ಯೋಗದ ವಿರುದ್ಧ ಹೋರಾಡುತ್ತಿದ್ದು, ಉಭಯ ದೇಶಗಳ ಆಯ್ಕೆ ಯುದ್ಧ ಅಲ್ಲ. ಭಾರತವು ಗಂಭೀರವಾಗಿ ಪರಿಗಣಿಸುವುದಾದರೆ ಪಾಕಿಸ್ತಾನ ಮಾತುಕತೆ ಸಿದ್ಧವಾಗಿದೆ ಎಂದು ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ, ಪರಮಾಣು ಶಕ್ತಿಯಾಗಿದ್ದರೂ, ಪಾಕಿಸ್ತಾನ ಆಕ್ರಮಣಕಾರಿ ಅಲ್ಲ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಮಾತ್ರ ಪರಮಾಣು ಸೌಲಭ್ಯಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಕಳೆದ 75 ವರ್ಷಗಳಲ್ಲಿ ಉಭಯ ದೇಶಗಳು ಮೂರು ಯುದ್ಧಗಳನ್ನು ನಡೆಸಿವೆ. ಇದರಿಂದ ಪಾಕಿಸ್ತಾನಕ್ಕೆ ನಷ್ಟ ಅನುಭವಿಸಿತು ಎಂದು ಷರೀಫ್, ಇಲ್ಲದಿದ್ದರೆ ಆ ಹಣವನ್ನು ಅಭಿವೃದ್ಧಿ ಮತ್ತು ಜನರ ಏಳಿಗೆಗಾಗಿ ಖರ್ಚು ಮಾಡಬಹುದಾಗಿತ್ತು ಎಂದಿದ್ದಾರೆ.
"ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಯುವವರೆಗೆ ಸಂಬಂಧಗಳು ಸರಿಹೋಗುವುದಿಲ್ಲ. ಇದಕ್ಕಾಗಿ ಅರ್ಥಗರ್ಭಿತ ಮಾತುಕತೆ ನಡೆಯಬೇಕು. ಇದನ್ನು ನಮ್ಮ ನೆರೆಯವರು ಅರ್ಥಮಾಡಿಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.