ಕಾಸರಗೋಡು: ಜಿಲ್ಲಾ ಬಂಟರ ಸಂಘದ 2023-24ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಸಮಾಜದ ಅರ್ಹ ವಿದ್ಯಾರ್ಥಿಗಳಿಂದ ನಿಗದಿತ ಫಾರಂನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2022-23ನೇ ವರ್ಷದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಬಿ ಗ್ರೇಡಿನೊಂದಿಗೆ ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಅಲ್ಲದೆ ಪದವಿ ಪೂರ್ವ ಮೊದಲ ವರ್ಷದ ಪರೀಕ್ಷೆಯಲ್ಲಿ 60 ಶೇಕಡ ಅಂಕಗಳೊಂದಿಗೆ ತೇರ್ಗಡೆ ಹೊಂದಿ +2 ಅಥವಾ ದ್ವಿತೀಯ ವರ್ಷದ ಪದವಿ ಪೂರ್ವ ತರಗತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
ಅರ್ಹ ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಪ್ರಮಾಣ ಪತ್ರ, ಪ್ರಮಾಣೀಕೃತ ಅಂಕ ಪಟ್ಟಿ ಸಹಿತ ಆಗಸ್ಟ್ 20ರ ಮುಂಚಿತವಾಗಿ ಆಯಾ ಪಂಚಾಯಿತಿ ಬಂಟರ ಸಂಘಗಳ ಕಾರ್ಯದರ್ಶಿಗಳ ಅಥವಾ ಜಿಲ್ಲಾ ಸಂಘದ ಸದಸ್ಯರ ಶಿಫಾರಸ್ಸಿನೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಫಿರ್ಕಾ ಸಂಘಗಳ ಅಧ್ಯಕ್ಷರು ಯಾ ಕಾರ್ಯದರ್ಶಿಗಳಿಗೆ ತಲುಪುವಂತೆ ಕಳುಹಿಸಬೇಕು. ಜಿಲ್ಲೆಯಲ್ಲಿ 8ನೇ ತರಗತಿ ಯಿಂದ ಡಿಗ್ರಿ ತನಕ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಫಿರ್ಕಾ ಸಂಘದ ಕಾರ್ಯದರ್ಶಿಗಳಿಗೆ ಕಳುಹಿಸಲಾದ ಪಟ್ಟಿಯಲ್ಲಿ ಹೆಸರಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರತಿಭಾ ಪುರಸ್ಕಾರ: ಕಳೆದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+ ಶ್ರೇಣಿಯೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷದಂತೆ ಈ ಬಾರಿಯೂ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುವುದು. ಅಲ್ಲದೆ ಕಳೆದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಬ್ಬ ಹುಡುಗಿ ಮತ್ತು ಒಬ್ಬ ಹುಡುಗನಿಗೆ ನಾಡೋಜ ಕವಿ ಡಾ. ಕಯ್ಯಾರ ಕಿಂಞಣ್ಣರೈ ಅವರ ಹೆಸರಿನಲ್ಲಿ ವಿಶೇಷ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.