ವಾರಾಣಸಿ: ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಎರಡು ಗಂಟೆ ಬಿಡುವು ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಮೀಕ್ಷೆಯನ್ನು ಮತ್ತೆ ಆರಂಭಿಸಿದೆ.
ವಾರಾಣಸಿ: ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಎರಡು ಗಂಟೆ ಬಿಡುವು ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಮೀಕ್ಷೆಯನ್ನು ಮತ್ತೆ ಆರಂಭಿಸಿದೆ.
ಸದ್ಯ ಮಸೀದಿ ಇರುವ ಜಾಗದಲ್ಲಿ ಅದಕ್ಕೂ ಮೊದಲು ದೇವಾಲಯ ಇತ್ತೇ ಎಂಬುದನ್ನು ಪತ್ತೆ ಮಾಡುವ ಸಲುವಾಗಿ ಸಮೀಕ್ಷೆ ನಡೆಸಲು ಎಎಸ್‌ಐಗೆ ಅವಕಾಶ ಕಲ್ಪಿಸಿ ಅಲಹಾಬಾದ್ ಹೈಕೋರ್ಟ್ ಗುರುವಾರ (ಆಗಸ್ಟ್ 3) ತೀರ್ಪು ನೀಡಿತ್ತು.
ಸಮೀಕ್ಷೆ ಹಿನ್ನೆಲೆಯಲ್ಲಿ ಮಸೀದಿ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಡಳಿತವೂ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿದೆ.
ಸಮೀಕ್ಷೆ ಬೆಳಗ್ಗೆ 7ಕ್ಕೆ ಆರಂಭವಾಗಿದ್ದು, ಮಧ್ಯಾಹ್ನ 12ರಿಂದ 2ರ ವರೆಗೆ ಬಿಡುವು ನೀಡಲಾಗಿತ್ತು.
ಮಸೀದಿ ಸ್ಥಳಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿರುವ ಹಿಂದೂ ಕಕ್ಷಿದಾರರು ಎಎಸ್‌ಐ ತಂಡದೊಂದಿಗೆ ಇದ್ದಾರೆ. ಆದರೆ, ಸಮೀಕ್ಷೆಯಲ್ಲಿ ಭಾಗವಹಿಸಬೇಕಿದ್ದ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಪ್ರತಿನಿಧಿಗಳು ದೂರ ಉಳಿದಿದ್ದಾರೆ.
ಹಿಂದೂ ಕಕ್ಷಿದಾರರ ಪರ ವಕೀಲ ಸುಭಾಷ್ ಚತುರ್ವೇದಿ ಅವರು, 'ಬೆಳಗ್ಗೆ 7ಕ್ಕೆ ಸಮೀಕ್ಷೆ ಆರಂಭಿಸಿದ್ದ ಎಎಸ್‌ಐ ತಂಡ, ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಮಧ್ಯಾಹ್ನ12ರಿಂದ ಎರಡು ಗಂಟೆ ಸಮಯ ಸಮೀಕ್ಷೆಯನ್ನು ನಿಲ್ಲಿಸಿತ್ತು. ಇದೀಗ ಮಧ್ಯಾಹ್ನ 2ರಿಂದ ಮತ್ತೆ ಸಮೀಕ್ಷೆ ಆರಂಭವಾಗಿದೆ' ಎಂದು ತಿಳಿಸಿದ್ದಾರೆ.