ಕಾಸರಗೋಡು: ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ವಿಶೇಷ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಲು ಜಿಲ್ಲಾ ಅಭಿವೃದ್ಧಿ ಸಮಿತಿ.ಸಭೆ ಶಿಫಾರಸುಮಾಡಿದೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಇ.ಚಂದ್ರಶೇಖರನ್ ವಿಷಯ ಪ್ರಸ್ತಾವನೆ ಮಂಡಿಸಿದರು. ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ 160 ಹುದ್ದೆಗಳು ಖಾಲಿ ಇವೆ. 50 ವೈದ್ಯರ ಹುದ್ದೆ ಹಾಗೂ 40 ತಜ್ಞ ವೈದ್ಯರ ಹುದ್ದೆಗಳು ಒಳಗೊಂಡಿರುವುದಾಗಿ ನಿರ್ಣಯದಲ್ಲಿ ಸೂಚಿಸಲಾಯಿತು. ಶಾಸಕರದ ಎಂ.ರಾಜಗೋಪಾಲನ್ , ಸಿ.ಎಚ್.ಕುಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್ ನಿರ್ಣಯವನ್ನು ಬೆಂಬಲಿಸಿದರು. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ತಕ್ಷಣ ವರದಿ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆಯಲ್ಲಿ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ರಿಯಾಯತಿ ದರ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಶಾಸಕ ಎ.ಕೆ.ಎಂ.ಅಶ್ರಫ್ ಮನವಿ ಮೇರೆಗೆ ಮಂಗಳೂರಿನ ವಿವಿಧ ಕಾಲೇಜುಗಳಿಗೆ ಮಾಹಿತಿ ಸಂಗ್ರಹಕ್ಕಾ ಕಳುಹಿಸಲಾಗಿದ್ದು, ಲಭ್ಯ ಮಾಹಿತಿಯನ್ನು ಕೆಎಸ್ಸಾರ್ಟಿಸಿ ಮುಖ್ಯಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಸಾರಿಗೆ ಅಧಿಕಾರಿ ಮಾಹಿತಿ ನೀಡಿದರು. ಮಂಜೇಶ್ವರ ಮಂಡಲದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಉಪ್ಪು ನೀರನ್ನು ಶುದ್ಧೀಕರಿಸಿ ಕುಡಿಯಲು ಯೋಗ್ಯವಾಗಿಸುವ ಯೋಜನೆಯು ಪ್ರಸಕ್ತ ಆರ್ಥಿಕ ವರ್ಷದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆಯ ಪ್ರಸ್ತಾವನೆಗಳಲ್ಲಿ ಸೇರ್ಪಡೆಗೊಂಡಿದೆ ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡು ಪುರಸಭೆ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ, ಕಾಞಂಗಾಡು ಕಾಸರಗೋಡು ಸಂಸದರ ಪ್ರತಿನಿಧಿ ಸಾಜಿದ್ ಮವ್ವಲ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ, ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ ಮೊದಲಾದವರು ಭಾಗವಹಿಸಿದ್ದರು.