ಕಾಸರಗೋಡ: ಆಹಾರ ಭದ್ರತಾ ಕಾಯ್ದೆಯಡಿ ರಚಿಸಲಾದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ರಾಜ್ಯ ಆಹಾರ ಆಯೋಗದ ಸದಸ್ಯೆ ಎಂ.ವಿಜಯಲಕ್ಷ್ಮಿ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು ಜಿಲ್ಲೆಯಲ್ಲಿ ಬೆಲೆ ಏರಿಕೆ ತಡೆಗೆ ನಡೆಸಿರುವ ತಪಾಸಣೆ ಮಾದರಿಯಾಗಿರುವುದಾಗಿ ತಿಳಿಸಿದ ಅವರು ಜಿಲ್ಲೆಯ ವಿವಿಧ ಹೋಟೆಲ್‍ಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ನಡೆಸಿದ ತಪಾಸಣೆಯ ಮಾಹಿತಿಯನ್ನು ಜಿಲ್ಲಾ ಸರಬರಾಜು ಅಧಿಕಾರಿ ಮತ್ತು ತಾಲೂಕು ಸರಬರಾಜು ಅಧಿಕಾರಿಗಳು ವಿವರಿಸಿದರು. ಮಂಜೇಶ್ವರಂನಲ್ಲಿ 20 ಅಂಗಡಿಗಳನ್ನು ತಪಾಸಣೆ ನಡೆಸಲಾಯಿತು. ದರಪಟ್ಟಿ ಪ್ರದರ್ಶಿಸದ ಹಾಗೂ ಹೆಚ್ಚಿನ ದರ ವಸೂಲಿ ಮಾಡಿದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಮಂಜೇಶ್ವರಂ ತಾಲೂಕು ಸರಬರಾಜು ಅಧಿಕಾರಿ ಕೆ.ಪಿ.ಸಾಜಿಮೋನ್ ಸಭೆಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಎಡಿಎಂ ನಡೆಸಿದ ಪರಿಶೀಲನೆಯಲ್ಲಿ ಒಂಬತ್ತು ಅಂಗಡಿಗಳಲ್ಲಿ ಅಕ್ರಮಗಳು ಪತ್ತೆಯಾಗಿವೆ ಎಂದು ಕಾಸರಗೋಡು ತಾಲೂಕು ಸರಬರಾಜು ಅಧಿಕಾರಿ ಕೆ.ವಿ.ದಿನೇಶನ್ ಸಭೆಗೆ ಮಾಹಿತಿ ನೀಡಿದರು. ಹೊಸದುರ್ಗ ತಾಲೂಕಿನಲ್ಲಿ ಸುಮಾರು 18 ಅಂಗಡಿಗಳನ್ನು ಪರಿಶೀಲನೆ ನಡೆಸಿದ್ದು, ನಾಲ್ಕು ಅಂಗಡಿಗಳಲ್ಲಿ ಬೆಲೆ ಮಾಹಿತಿ ಪ್ರದರ್ಶಿಸದಿರುವುದು ಕಂಡು ಬಂದಿದೆ ಎಂದು ನಾಗರಿಕ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು ತಿಳಿಸಿದರು. ಜಿಲ್ಲೆಯ ಅಂಗನವಾಡಿಗಳಿಗೆ ಆಹಾರ ಧಾನ್ಯಗಳು ತಲುಪುತ್ತಿರುವ ಬಗ್ಗೆಖಚಿತಪಡಿಸಿಕೊಳ್ಳಬೇಖು. ಮುಂದಿನ ಹಂತದಲ್ಲಿ ಹೋಟೆಲ್‍ಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುವುದು. ಮೀನು ಮಾರುಕಟ್ಟೆಗಳಲ್ಲಿ ಶುಚಿತ್ವ ಪಾಲಿಸದೆ ವ್ಯಾಪಾರ ನಡೆಯುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆಗೆ ನಡೆಸಬೇಕು ಎಂದು ಸಮಿತಿ ಸೂಚಿಸಿತು. ಮೀನು ಮಾರುಕಟ್ಟೆ ನವೀಕರಣಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಹಾಗೂ ರಸ್ತೆಯಿಂದ ಮೀನುಮಾರಾಟಗಾರರನ್ನು ಮಾರುಕಟ್ಟೆಯೊಳಗೆ ಸ್ಥಳಾಂತರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.
ಸಹಾಯಕ ಜಿಲ್ಲಾಧಿಕಾರಿ (ಆರ್ ಆರ್) ಸಿರೋಶ್ ಜಾನ್, ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಎ.ಸಜಾದ್, ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಡಿವೈಎಸ್ಪಿ ಪಿ.ಕೆ.ಸುಧಾಕರನ್, ಆಹಾರ ಸುರಕ್ಷತಾ ಅಧಿಕಾರಿ ಪಿ.ಬಿ.ಆದಿತ್ಯನ್, ಆಹಾರ ಸುರಕ್ಷತಾ ಪಡಿತರ ನಿರೀಕ್ಷಕ ಎಂ.ಎಂ.ಷಣ್ಮುಖನ್, ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.