ನವದೆಹಲಿ: 'ಸುದ್ದಿ ಪ್ರಸಾರದಲ್ಲಿ ನಿರ್ಬಂಧಗಳನ್ನು ಮೀರುವ ಪ್ರಕರಣಗಳಲ್ಲಿ ಟಿ.ವಿ. ಚಾನಲ್‌ಗಳಿಗೆ ವಿಧಿಸುವ ದಂಡದ ಮೊತ್ತದ ಪ್ರಮಾಣವು, ವಾಹಿನಿಯು ನಿರ್ದಿಷ್ಟ ಕಾರ್ಯಕ್ರಮದಿಂದ ಗಳಿಸುವ ಲಾಭಕ್ಕೆ ಅನುಗುಣವಾಗಿ ಇರಬೇಕು' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
'ನಿಯಂತ್ರಣ ಸಂಬಂಧ ಕಠಿಣವಾದ ನಿಯಮಗಳನ್ನು ರೂಪಿಸದಿದ್ದರೆ, ಸಂಹಿತೆಯನ್ನು ಪಾಲಿಸುವ ವಿಷಯದಲ್ಲಿ ಟಿ.ವಿ ಚಾನಲ್‌ಗಳಿಗೆ ಯಾವುದೇ ಬದ್ಧತೆ ಇರುವುದಿಲ್ಲ' ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯರ ಪೀಠವು ಕಟುವಾಗಿ ಹೇಳಿತು.
ಟಿ.ವಿ.ಚಾನಲ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂಬ ಸ್ಪಷ್ಟ ಇಂಗಿತವನ್ನು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು ಇದೇ ಸಂದರ್ಭದಲ್ಲಿ ನೀಡಿತು.
'ಸುದ್ದಿ ಮಾಧ್ಯಮಗಳಿಗೆ ಪ್ರಸಾರಕ್ಕೆ ಮೊದಲು ಅಥವಾ ನಂತರ ಸೆನ್ಸಾರ್‌ಶಿಪ್ ವಿಧಿಸಲು ತಾನು ಬಯಸುವುದಿಲ್ಲ. ಆದರೆ, ಟಿ.ವಿ. ಚಾನಲ್‌ಗಳಿಗೆ ಪರಿಣಾಮಕಾರಿಯಾದ ಸ್ವಯಂ ನಿಯಂತ್ರಣ ಅಗತ್ಯ. ನಿರ್ಬಂಧವನ್ನು ಉಲ್ಲಂಘಿಸುವ ಪ್ರಕರಣಗಳಲ್ಲಿ ವಿಧಿಸಲಾಗುವ ದಂಡದ ಮೊತ್ತದ ಪ್ರಮಾಣ ನಿರ್ದಿಷ್ಟ ಕಾರ್ಯಕ್ರಮದಿಂದ ವಾಹಿನಿ ಗಳಿಸುವ ಲಾಭದ ಮೊತ್ತಕ್ಕೆ ಅನುಗುಣವಾಗಿ ಇರಬೇಕು' ಎಂದು ಸಲಹೆ ಮಾಡಿತು.
ಬಾಂಬೆ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ಸುಶಾಂತ್ ಸಿಂಗ್ ರಾಜ್‌ಪೂತ್ ಪ್ರಕರಣದಲ್ಲಿ ಮಾಧ್ಯಮಗಳು ನಿಯಂತ್ರಣ ಮೀರಿ ವರ್ತಿಸಿದವು ಎಂದು ಹೇಳಿದ ಪೀಠವು, ಇದಕ್ಕಾಗಿ ಟಿ.ವಿ. ವಾಹಿನಿಯೊಂದಕ್ಕೆ ವಿಧಿಸಿದ್ದ ₹ 1 ಲಕ್ಷ ದಂಡದ ಮೊತ್ತವು ಲಾಭಕ್ಕೆ ಅನುಗುಣವಾಗಿಲ್ಲ ಎಂದು ಅಭಿಪ್ರಾಯಪಟ್ಟಿತು.
ಸುಶಾಂತ್ ಸಿಂಗ್ ರಾಜ್‌ಪೂತ್ ಪ್ರಕರಣವನ್ನು ಉಲ್ಲೇಖಿಸಿ, ಈ ವಿಷಯದಲ್ಲಿ ಎಲ್ಲರೂ ಹದ್ದುಮೀರಿ ವರ್ತಿಸಿದರು. ಕೆಲ ಟಿ.ವಿ. ವಾಹಿನಿಗಳು ವರ್ಚುವಲ್ ಆಗಿ ಇಂಥ ಪ್ರಕರಣಗಳ ಕ್ರಿಮಿನಲ್ ವಿಚಾರಣೆಗೆ ಮುಂದಾಗಿದ್ದವು ಎಂದು ಹೇಳಿತು.
ಕಠಿಣವಾದ ನಿಯಮಗಳು ಅಗತ್ಯ ಎಂದು ಒತ್ತಿ ಹೇಳಿದ ನ್ಯಾಯಪೀಠವು, ಕಾರ್ಯಕ್ರಮಗಳ ಅಪ್ ಲಿಂಕ್ ಮತ್ತು ಡೌನ್‌ಲಿಂಕ್‌ಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಪೀಠವು ಗಮನಿಸಿದೆ ಎಂದು ತಿಳಿಸಿತು.
ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ಪರ ವಕೀಲ ಅರವಿಂದ್ ದಾತಾರ್ ಅವರಿಗೆ, ಟಿ.ವಿ.ಚಾನಲ್‌ಗಳ ಸ್ವಯಂ ನಿರ್ಬಂಧ ಕುರಿತು ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಆರ್.ವಿ.ರವೀಂದ್ರನ್ ಅವರ ಸಲಹೆ ಪಡೆಯಬಹುದು ಎಂದು ತಿಳಿಸಿತು.
ಚಾನಲ್‌ನ ವಿರುದ್ಧ ಪ್ರತಿಕೂಲ ಆದೇಶ ಹೊರಬಿದ್ದರೆ ಅದರ ಲೈಸೆನ್ಸ್ ನವೀಕರಣ ಆಗುವುದಿಲ್ಲ ಎಂದು ದಾತಾರ್ ಈ ಸಂದರ್ಭದಲ್ಲಿ ಹೇಳಿದರು.
ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಪ್ರಸ್ತುತ ಮೂರು ಸ್ತರದ ವ್ಯವಸ್ಥೆಯಿದೆ. ಭಿನ್ನ ಚಾನಲ್‌ಗಳಿಗೆ ಅನುಗುಣವಾಗಿ ಇತರೆ ಸಂಘಟನೆಗಳಿವೆ. ಈ ವಿಷಯದಲ್ಲಿ ಸರ್ಕಾರ ಅವುಗಳ ಅಭಿಪ್ರಾಯಗಳನ್ನು ಪರಿಗಣಿಸಲಿದೆ' ಎಂದು ಹೇಳಿದರು.