HEALTH TIPS

ಯುಪಿಎಸ್‌ಸಿ ಪರೀಕ್ಷೆ ಮಾರ್ಪಾಡಿಗೆ ಶಿಫಾರಸು

                ವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಐಎಎಸ್‌, ಐಪಿಎಸ್‌ ಸೇರಿದಂತೆ ವಿವಿಧ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ನಡೆಸುವ ಮೂರು ಹಂತದ ಪರೀಕ್ಷೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಇದನ್ನು ಮಾರ್ಪಡಿಸುವ ಬಗ್ಗೆ ಕೇಂದ್ರ ಸರ್ಕಾರವು ಮರುಚಿಂತನೆ ನಡೆಸುವ ಅಗತ್ಯವಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

               ಈ ಸಂಬಂಧ ಇತ್ತೀಚೆಗೆ ಸಂಸದ ಸುಶೀಲ್‌ ಕುಮಾರ್‌ ಮೋದಿ ಅಧ್ಯಕ್ಷತೆಯ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿಯು, ‌ಕೇಂದ್ರದ ನೇಮಕಾತಿ ಸಂಸ್ಥೆಗಳ ಕಾರ್ಯ ನಿರ್ವಹಣೆ ಕುರಿತ ವಿಮರ್ಶಾ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದೆ.

               ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಲ್ಲಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಪದವೀಧರರದ್ದೇ ಸಿಂಹಪಾಲು. ಯುಪಿಎಸ್‌ಸಿ ನಡೆಸುವ ಪರೀಕ್ಷೆಯತ್ತ ಈ ಎರಡೂ ಕ್ಷೇತ್ರದ ಪದವೀಧರರಿಗೆ ಇರುವ ಸೆಳೆತ ಸಹಜವಾದುದು. ಆದರೆ, ಇದು ದೇಶದಲ್ಲಿ ವೃತ್ತಿಪರ ಪರಿಣತ ಎಂಜಿನಿಯರ್‌ ಹಾಗೂ ವೈದ್ಯರ ಅಭಾವ ಸೃಷ್ಟಿಗೆ ನಾಂದಿ ಹಾಡಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

‌                 ಇದಕ್ಕೆ 2011ರಿಂದ 2020ರ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂಕಿ-ಅಂಶಗಳನ್ನು ಮುಂದಿಟ್ಟಿದೆ. ಈ ಅವಧಿಯಲ್ಲಿ ಆಯ್ಕೆಯಾದ ಮೂವರ ಪೈಕಿ ಇಬ್ಬರು ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಪದವೀಧರರಾಗಿದ್ದಾರೆ ಎಂದು ತಿಳಿಸಿದೆ.

ಆತಂಕ ಏಕೆ?: ಕೆಲವು ಅಭ್ಯರ್ಥಿಗಳು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರೆ, ಬಹುತೇಕರಿಗೆ ಎರಡು-ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆ.

            ಆಯ್ಕೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಹಂತವನ್ನು ಒಳಗೊಂಡಿರುತ್ತದೆ. ಇದು ಸುದೀರ್ಘ ಪ್ರಕ್ರಿಯೆಯಾಗಿದೆ. ಹಾಗಾಗಿ, ಇದಕ್ಕೆ ಕಠಿಣ ತಯಾರಿ ನಡೆಸುವ ಆಕಾಂಕ್ಷಿಗಳು ಹೆಚ್ಚಿನ ಸಮಯವನ್ನೂ ವ್ಯಯಿಸುತ್ತಾರೆ. ಹಾಗಾಗಿ, ನೇಮಕಾತಿ ಪ್ರಕ್ರಿಯೆಯ ಬದಲಾವಣೆಗೆ ಇದು ಸಕಾಲವಾಗಿದೆ ಎಂದು ವರದಿ ಹೇಳಿದೆ.

              ಎಂಜಿನಿಯರ್‌ಗಳೇ ಹೆಚ್ಚು: ಯುಪಿಎಸ್‌ಸಿಯು 2011-2020ರ ಅವಧಿಯಲ್ಲಿ ನಡೆಸಿರುವ ಪರೀಕ್ಷೆಯಲ್ಲಿ ಒಟ್ಟು 10,679 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 5,888 ಎಂಜಿನಿಯರಿಂಗ್ (ಶೇ 55.06) ಹಾಗೂ 1,130 ವೈದ್ಯಕೀಯ ಪದವೀಧರರು ಇದ್ದಾರೆ (ಶೇ 10.58). ಒಟ್ಟಾರೆ ಈ ಎರಡೂ ಕ್ಷೇತ್ರದಲ್ಲಿ ಶಿಕ್ಷಣ ಪಡೆದ 7,010 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರ ಪ್ರಮಾಣ ಶೇ 65.64ರಷ್ಟಿದೆ ಎಂದು ವಿವರಿಸಿದೆ.

           ಮತ್ತೊಂದೆಡೆ ನಾಗರಿಕ ಸೇವೆಗಳಿಗೆ ಮಾನವಿಕ ವಿಷಯಗಳಲ್ಲಿ ಪದವಿ ಪಡೆದವರು ಆಯ್ಕೆಯಾಗುವ ಪ್ರಮಾಣ ಕಡಿಮೆ ಇದೆ. ಈ ಅವಧಿಯಲ್ಲಿ 2,835 ಅಭ್ಯರ್ಥಿಗಳಷ್ಟೇ (ಶೇ 26.54) ಆಯ್ಕೆಯಾಗಿದ್ದಾರೆ. ಉಳಿದ 834 ಅಭ್ಯರ್ಥಿಗಳು (ಶೇ 7.8) ಇತರೇ ವಿಷಯಗಳಲ್ಲಿ ಪದವಿ ಅಧ್ಯಯನ ಮಾಡಿದವರಾಗಿದ್ದಾರೆ ಎಂದು ಹೇಳಿದೆ.

             ಇತ್ತೀಚಿನ ದಿನಗಳಲ್ಲಿ ನಾಗರಿಕ ಸೇವಾ ಹುದ್ದೆಗಳಿಗೆ ಆಯ್ಕೆಯಾಗುವವರಲ್ಲಿ ಶೇ 70ರಷ್ಟು ಮಂದಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣ ಪಡೆದವರಾಗಿದ್ದಾರೆ.

              ಪ್ರತಿವರ್ಷ ಎಂಜಿನಿಯರಿಂಗ್‌ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಹಾಗಾಗಿ, ತಂತ್ರಜ್ಞಾನ ಕ್ಷೇತ್ರವು ಪರಿಣತ ತಂತ್ರಜ್ಞರ ಕೊರತೆ ಎದುರಿಸುವಂತಾಗಿದೆ. ಇದು ದೇಶದ ಅಭ್ಯುದಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

2016ರಲ್ಲಿ ಆಯ್ಕೆಯಾದ 1,209 ಅಭ್ಯರ್ಥಿಗಳ ಪೈಕಿ 717 ಹಾಗೂ 2017ರಲ್ಲಿ ಆಯ್ಕೆಯಾದ 1,056 ಅಭ್ಯರ್ಥಿಗಳ ಪೈಕಿ 699 ಮಂದಿ ಎಂಜಿನಿಯರಿಂಗ್‌ ಪದವೀಧರರಾಗಿದ್ದಾರೆ. 2012ರಲ್ಲಿ ಈ ಪ್ರಮಾಣ ಕೊಂಚ ಇಳಿಕೆಯಾಗಿದ್ದು, 1,091 ಹುದ್ದೆಗಳ ಪೈಕಿ 408 ಮಂದಿಯಷ್ಟೇ ಆಯ್ಕೆಯಾಗಿದ್ದಾರೆ.

2014ರಲ್ಲಿ ಆಯ್ಕೆಯಾದ 1,363 ಅಭ್ಯರ್ಥಿಗಳ ಪೈಕಿ 183 ವೈದ್ಯಕೀಯ ಪದವೀಧರರಿದ್ದಾರೆ. 2020ರಲ್ಲಿ ವೈದ್ಯಕೀಯ ಶಿಕ್ಷಣ ಪಡೆದ 33 ಮಂದಿಯಷ್ಟೇ ಆಯ್ಕೆಯಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries