ಉಪ್ಪಳ: ಕೊಂಡೆವೂರುಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಆಶ್ರಮದ ಟ್ರಸ್ಟಿಗಳಲ್ಲಿ ಓರ್ವರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರವರು “ಹೆಮಟೋಲಜಿ ಎನಲೈಸರ್(ರೋಗಿಯ ರಕ್ತ ಮಾದರಿ ಪರೀಕ್ಷೆ)ಯಂತ್ರವನ್ನು “ಮಂಗಲ್ಪಾಡಿ ಸರಕಾರಿ ಆಸ್ಪತ್ರೆ”ಗೆ ದಾನವಾಗಿ ಸಮರ್ಪಿಸಿದರು.
ಪೂಜ್ಯ ಶ್ರೀಗಳು ತಮ್ಮ ಆಶೀರ್ವಚನದಲ್ಲಿ “ ಒಳ್ಳೆಯ ಮನಸ್ಸಿನವರಾದ ನಾವುಗಳೆಲ್ಲ ಸದಾಶಿವ ಶೆಟ್ಟಿಯವರ ರೀತಿ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಸುಂದರ ಸಮಾಜ ಬೆಳೆಸೋಣ”ಎಂದು ಕರೆನೀಡಿದರು.
ಸದಾಶಿವ ಶೆಟ್ಟಿಯವರು “ನಿಸ್ವಾರ್ಥ ಸೇವೆ ಮಾಡುವ ಈ ಕೊಂಡೆವೂರು ಮಠ ಜನತಾ ಸೇವೆಯೇ ಜನಾರ್ದನ ಸೇವೆ ಎಂದು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ಆಶ್ರಮದ ಯಾವುದೇ ಚಟುವಟಿಕೆಗಳಲ್ಲಿ ಸೇವೆ ಮಾಡಲು ನನಗೆ ಅತ್ಯಂತ ಸಂತಸವಾಗುತ್ತಿದೆ” ಎಂದು ಮನದಾಳದಿಂದ ನುಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಮೀಮಾ ಟೀಚರ್, ಉಪಾಧ್ಯಕ್ಷ ಶ್ರೀ ಬಿ.ಕೆ.ಮೊಹಮ್ಮದ್ ಹನೀಫ್, ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ.ಶಾಂಟಿ, ಮಂಜೇಶ್ವರ ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀ ರಿಜೇಶ್ ರವರುಗಳು ಶ್ರೀಮಠದ ಮೂಲಕ ಇಂತಹ ಒಳ್ಳೆಯ ಕೆಲಸವಾಗುತ್ತಿರುವುದಕ್ಕೆ ನಮಗೆ ಹೆಮ್ಮೆಯೆನಿಸಿದೆ ಎಂದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಂಸೀನಾ, ಮುಂಬಯಿ ಉದ್ಯಮಿ ಶ್ರೀ ಮೋಹನ ಶೆಟ್ಟಿ ಮಜ್ಜಾರ್ ಹಾಗೂ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ಶ್ರೀ ಚಂದ್ರಶೇಖರ್ ತಂಬಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ರವರು ಯಂತ್ರವನ್ನು ಸ್ವೀಕರಿಸಿ ಮಾತನಾಡಿ “ಕೇರಳ ಕರ್ನಾಟಕ ಗಡಿಪ್ರದೇಶವಾದ ಈ ಭಾಗದಲ್ಲಿ ಶ್ರೀಮಠದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದರಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಶ್ರೀ ಸದಾಶಿವ ಶೆಟ್ಟರ ಈ ಮಹತ್ತರ ಕೊಡುಗೆಯನ್ನು ಮರೆಯಲಾಗದು”ಎಂದರು. ಕು.ಗಾಯತ್ರಿ ಕೊಂಡೆವೂರು ಪ್ರಾರ್ಥನೆಯ ಕಾರ್ಯಕ್ರಮದ ಸ್ವಾಗತಿಸಿ, ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.