ವಾಷಿಂಗ್ಟನ್: ಸ್ವಾತಂತ್ರ್ಯ ದಿನದಂದು (ಆಗಸ್ಟ್ 15) ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಸಾಕ್ಷಿಯಾಗಲು ಅಮೆರಿಕದ ದ್ವಿಪಕ್ಷೀಯ ಸಂಸದರ ತಂಡ ಭಾರತಕ್ಕೆ ಪ್ರಯಾಣಿಸುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಭಾರತೀಯ ಮೂಲದ ಅಮೆರಿಕ ನಿವಾಸಿ ರೋ ಖನ್ನಾ ಮತ್ತು ಕಾಂಗ್ರೆಸ್‌ನ ಮೈಕೆಲ್ ವಾಲ್ಟ್ಜ್ 'ದ್ವಿಪಕ್ಷೀಯ ಕಾಂಗ್ರೆಸ್ ನಿಯೋಗ'ದ ನೇತೃತ್ವ ವಹಿಸಿದ್ದಾರೆ.
ಭೇಟಿಯ ವೇಳೆ ಅವರು ಮುಂಬೈನಲ್ಲಿ ವಾಣಿಜ್ಯ, ತಂತ್ರಜ್ಞಾನ ದಿಗ್ಗಜರ, ಬಾಲಿವುಡ್ ನಟರನ್ನು ಹಾಗೂ ಪ್ರಮುಖ ರಾಜಕೀಯ ನಾಯಕರನ್ನು ಭೇಟಿಯಾಗಲಿದ್ದಾರೆ.
'ಎರಡು ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವಿರುವ ದೇಶಗಳ ನಡುವೆ ಆರ್ಥಿಕ ಮತ್ತು ರಕ್ಷಣಾ ಸಂಬಂಧಗಳ ಬಲವರ್ಧನೆ ಬಗ್ಗೆ ಈ ಬಾರಿಯ ಭೇಟಿಯಲ್ಲಿ ಚರ್ಚಿಸಲಿದ್ದೇವೆ. ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಆಧಾರದ ಮೇಲೆ ನಾವು ಪ್ರಗತಿ ಸಾಧಿಸಲು ಮತ್ತು ನಮ್ಮ ಪಾಲುದಾರಿಕೆಯನ್ನು ನಿರ್ಮಿಸಲು ಪ್ರಯತ್ನಿಸುವುದನ್ನು ಮುಂದುವರಿಸಬೇಕು. ಈ ನಿಯೋಗವು ಮತ್ತಷ್ಟು ಸಹಯೋಗವನ್ನು ಹೆಚ್ಚಿಸಲು ಮತ್ತು ಹಂಚಿಕೊಂಡ ಗುರಿಗಳನ್ನು ಮುನ್ನಡೆಸಲು ಐತಿಹಾಸಿಕ ಅವಕಾಶವಾಗಿದೆ' ಎಂದು ನಿಯೋಗದ ಮುಂದಾಳತ್ವವಹಿಸುರುವ ಭಾರತ ಮೂಲದ ಖನ್ನಾ ಹೇಳಿದ್ದಾರೆ.