ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ಭರ್ತಿಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ. ಅಗರು ಸೋಮವಾರ ಕಾಸರಗೋಡುಬ್ಲಾಕ್ ಪಂಚಾಯಿತಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸ್ಥಳೀಯಾಡಳಿತ ಸಂಸ್ಥೆ ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಹೆಚ್ಚಿನ ಪಾರದರ್ಶಕತೆ ಪಾಲಿಸಿಕೊಂಡು ಬರುತ್ತಿದ್ದು, ಸುಮಾರು 31ಸಾವಿರ ಸಿಬ್ಬಂದಿ ಅವರು ಬಯಸಿದಲ್ಲಿ ವರ್ಗಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬೀದಿನಾಯಿ ಉಪಟಳ ಹೆಚ್ಚಾಗಿದ್ದು ಪ್ರತಿ ಬ್ಲಾಕ್‍ಗೆ ಒಂದರಂತೆ ಎಸಿಬಿ ಕೇಂದ್ರ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಬೀದಿಬದಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟುವ ಮೂಲಕ ಬೀದಿನಾಯಿಗಳಿಗೆ ಆಹಾರ ಲಭಿಸುವುದನ್ನು ಕಡಿಮೆಮಾಡಬಹುದಾಗಿದೆ. ತ್ಯಾಜ್ಯ ವಿಲೇವಾರಿಗೆ ಪ್ರತಿಯೊಬ್ಬ ಕೈಜೋಡಿಸಬೇಕಾದ ಅನಿವಾರ್ಯತೆಯಿದೆ. ಎಬಿಸಿ ಕೇಂದ್ರ ಸ್ಥಾಪಿಸುವಲ್ಲಿ ಕಜೆಲವೊಂದು ಕಾನೂನು ಕ್ರಮ ಅತ್ಯಂತ ಜಟಿಲವಾಗಿದ್ದು, ಇದನ್ನು ನಿವಾರಿಸಿಕೊಂಡು ಮುಂದೆ ಸಾಗುವುದೂ ಸರ್ಕಾರಕ್ಕೆ ಸವಾಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ಕೀ ವಿತರಣೆ ಹಾಗೂ ಪಿಎಂಎವೈ ಮನೆಗಳ ಕೀಲಿಕೈ ವಿತರಣೆಯನ್ನು ಶಾಸಕರಾದ ಸಿ.ಎಚ್ ಕುಞಂಬು ಹಾಗೂ ಎ.ಕೆ. ಎಂ ಅಶ್ರಫ್ ನೆರವೇರಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಎ ಅಶ್ರಫಲಿ, ಕಾಸರಗೋಡು ನಗರಸಭೆ ಅಧ್ಯಕ್ಷ ವಕೀಲ ವಿ.ಎಂ.ಮುನೀರ್, ಬ್ಲಾಖ್ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ.