ಸಿಡ್ನಿ: ಆಸ್ಟ್ರೇಲಿಯಾದಲ್ಲಿ ವಿವಿಧ ರಾಷ್ಟ್ರಗಳ ಮಿಲಿಟರಿ ತರಬೇತಿ ವೇಳೆ ದುರಂತ ಸಂಭವಿಸಿದ್ದು, ಅಮೆರಿಕ ಸೇನಾ ವಿಮಾನ ಪತನವಾಗಿ ಹಲವರು ಗಾಯಗೊಂಡಿದ್ದಾರೆ.
ವಿವಿಧ ರಾಷ್ಟ್ರಗಳ ಮಿಲಿಟರಿ ತರಬೇತಿ ವೇಳೆ ಅಮೆರಿಕದ ಯುದ್ಧ ವಿಮಾನವೊಂದು ಪತನಗೊಂಡ ಪರಿಣಾಮ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ವಿಮಾನ ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ಬಳಿಯ ದ್ವೀಪದಲ್ಲಿ ಪತನಗೊಂಡಿದೆ. ಗಾಯಗೊಂಡ ನಾಲ್ವರು ಸಿಬ್ಬಂದಿಯಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಗಾಯಗೊಂಡ ಯೋಧರು ಅಮೆರಿಕದವರಾಗಿದ್ದು, ಇದೊಂದು ದುರದೃಷ್ಟಕರ ಘಟನೆಯಾಗಿದೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಈ ಸಮಯದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.