ರೈಲುಗಳಿಗೆ ಕಲ್ಲೆಸೆತದ ಬೆನ್ನಿಗೆ, ಹಳಿಯಲ್ಲಿ ಕಲ್ಲಿರಿಸಿ ಬುಡಮೇಲು ಕೃತ್ಯದ ಸಂಚು : ಕಾಸರಗೋಡು ಕೋಟಿಕುಳಂನಲ್ಲಿ ಘಟನೆ
ಕಾಸರಗೋಡು: ರೈಲುಗಳ ಮೇಲೆ ಕಲ್ಲುತೂರಾಟ ಮುಂದುವರಿಯುತ್ತಿರುವ ಜತೆಗೆ, ರೈಲ್ವೆ ಹಳಿಯಲ್ಲಿ ಕಲ್ಲು, ಕ್ಲೋಸೆಟ್ ತುಣುಕುಗಳನ್ನಿರಿಸುವ ಮೂಲಕ ಬುಡಮೇಲು ಕೃತ್ಯದ ಸಂಚು ಬೆಳಕಿಗೆ ಬಂದಿದೆ. ಕಾಸರಗೋಡು ಕೋಟಿಕುಳಂ ಸನಿಹದ ಚೆಂಬರಿಕ ಸುರಂಗಮಾರ್ಗದ ಸನಿಹ ರೈಲ್ವೆ ಹಳಿಯಲ್ಲಿ ಶೌಚಗೃಹದ ಕ್ಲೋಸೆಟ್ ತುಣುಕು ಹಾಗೂ ಕಲ್ಲು ಪತ್ತೆಯಾಗಿದೆ.
ಗುರುವಾರ ಮಧ್ಯಾಹ್ನ ಮಂಗಳೂರಿನಿಂದ ಆಗಮಿಸಿದ ಕೊಯಂಬತ್ತೂರು ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲು ಈ ಹಾದಿಯಾಗಿ ಸಾಗುತ್ತಿದ್ದಂತೆ ರೈಲಿಗೆ ಅಪ್ಪಳಿಸಿದ ಶಬ್ದ ಕೇಳಿಸಿದ್ದು, ಈ ಬಗ್ಗೆ ರೈಲಿನ ಲೊಕೋಪೈಲಟ್ ಕಾಸರಗೋಡು ನಿಲ್ದಾಣದ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮೇಲ್ಪರಂಬ ಠಾಣೆ ಪೊಲೀಸ್, ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಸುರಕ್ಷಾ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ರೈಲ್ವೆ ಹಳಿಯಲ್ಲಿ ಕ್ಲೋಸೆಟ್ ತುಣುಕು, ಕಲ್ಲು ಪತ್ತೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಐಭವ್ ಸಕ್ಸೇನಾ ನಿರ್ದೇಶ ಪ್ರಕಾರ ಪೊಲೀಸರೂ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರದೇಶದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದ ಪೊಲೀಸರು ಮಾಹಿತಿ ಕಲೆಹಾಕಲಾರಂಭಿಸಿದ್ದಾರೆ.
ಬುಧವಾರ ಕಾಸರಗೋಡಿನಿಂದ ತಿರುವನಂತಪುರ ತೆರಳುತ್ತಿದ್ದ ವಂದೇಭಾರತ್ ರೈಲಿಗೆ ಕಣ್ಣೂರು ಸನಿಹ ಕಲ್ಲೆಸೆತವುಂಟಾಗಿತ್ತು. ಕಳೆದ ಕೆಲವು ವಚರ್ಷಗಳಿಂದ ರೈಲ್ವೆ ಹಳಿಯಲ್ಲಿ ಕಲ್ಲು, ಕಬ್ಬಿಣ, ಕಾಂಕ್ರೀಟ್ ತುಣುಕುಗಳನ್ನಿರಿಸುವುದು, ರೈಲಿಗೆ ಕಲ್ಲೆಸೆತ ಮುಂತಾದ ಬುಡಮೇಲು ಕೃತ್ಯಗಳು ನಡೆಯುತ್ತಲೇ ಇದ್ದು, ಆರೋಪಿಗಳ ಪತ್ತೆಕಾರ್ಯ ಆರ್‍ಪಿಎಫ್, ಪೊಲೀಸ್ ವಲಯಕ್ಕೂ ಸವಾಲಾಗಿ ಪರಿಣಮಿಸಿದೆ.