ಇಸ್ಲಾಮಾಬಾದ್: ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೊ) ವಿಶ್ವದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಚಂದ್ರಯಾನ-3 ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಸಾಫ್ಟ್ ಲ್ಯಾಂಡಿಂಗ್ ಆಗುವುದನ್ನು ರಾಷ್ಟ್ರೀಯ ದೂರದರ್ಶನದಲ್ಲಿ ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದರು. ಚೌಧರಿ ಅವರ ಕೋರಿಕೆ ಪಾಕಿಸ್ತಾನದಲ್ಲಿ ಪರ-ವಿರೋಧ ಚರ್ಚೆ ಹುಟ್ಟುಹಾಕಿತ್ತು.
ಪಾಕಿಸ್ತಾನದ ಯೂಟ್ಯೂಬರ್ ಒಬ್ಬರು ಚಂದ್ರಯಾನ-3 ಸಂಬಂಧಪಟ್ಟಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದು, ವ್ಯಕ್ತಿಯೊಬ್ಬರ ವ್ಯಂಗ್ಯಭರಿತ ಉತ್ತರ ಕೇಳಿ ನೆಟ್ಟಿಗರು ನಗೆಗಡಲಲ್ಲಿ ತೇಲಾಡಿದ್ದಾರೆ.
'ನಾವು ಈಗಾಗಲೇ ಚಂದ್ರನ ಮೇಲೆ ಬದುಕುತ್ತಿದ್ದೇವೆ. ಚಂದ್ರ ಮತ್ತು ಪಾಕಿಸ್ತಾನದ ನಡುವೆ ಸಾಮ್ಯತೆಯಿದೆ. ಎರಡರಲ್ಲೂ ನೀರು, ವಿದ್ಯುತ್‌ನಂತಹ ಅಗತ್ಯ ಸೌಲಭ್ಯಗಳಿಲ್ಲ. ಪಾಕಿಸ್ತಾನದ ಪ್ರಜೆಗಳಿಗೆ ಚಂದ್ರನ ಬಳಿಗೆ ಹೋಗುವ ಅಗತ್ಯವೇ ಇಲ್ಲ. ಚಂದ್ರನಲ್ಲಿರುವ ವಾತಾವರಣವನ್ನು ಇಲ್ಲಿನ ಪ್ರಜೆಗಳು ತಮ್ಮ ಸುತ್ತಮುತ್ತಲಿನಲ್ಲಿ ಅನುಭವಿಸಬಹುದಾಗಿದೆ' ಎಂದು ದೇಶದ ಪರಿಸ್ಥಿತಿ ಬಗ್ಗೆ ಹಾಸ್ಯಾಸ್ಪದವಾಗಿ ಹೇಳಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಾಸ್ತವ ಸ್ಥಿತಿಯನ್ನು ವ್ಯಂಗ್ಯದ ರೀತಿಯಲ್ಲಿ ವ್ಯಕ್ತಪಡಿಸಿದ ಪಾಕ್ ಪ್ರಜೆಯ ಸಮಯ ಪ್ರಜ್ಞೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.