ನವದೆಹಲಿ (PTI): ಒಟಿಟಿ ವೇದಿಕೆಗಳಲ್ಲಿ ಧೂಮಪಾನ ಮಾಡುವಂತಹ ದೃಶ್ಯಗಳು ಹೆಚ್ಚಾಗುತ್ತಿದ್ದು, ತಂಬಾಕು ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವಂತೆ ರೂಪಿಸಲಾಗಿರುವ ಆನ್‌ಲೈನ್ ಕಂಟೆಂಟ್‌ಗೆ ತಕ್ಷಣವೇ ನಿರ್ಬಂಧ ವಿಧಿಸಬೇಕಿದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಒತ್ತಾಯಿಸಿದ್ದಾರೆ.
ನವದೆಹಲಿ (PTI): ಒಟಿಟಿ ವೇದಿಕೆಗಳಲ್ಲಿ ಧೂಮಪಾನ ಮಾಡುವಂತಹ ದೃಶ್ಯಗಳು ಹೆಚ್ಚಾಗುತ್ತಿದ್ದು, ತಂಬಾಕು ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವಂತೆ ರೂಪಿಸಲಾಗಿರುವ ಆನ್‌ಲೈನ್ ಕಂಟೆಂಟ್‌ಗೆ ತಕ್ಷಣವೇ ನಿರ್ಬಂಧ ವಿಧಿಸಬೇಕಿದೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಸಿನಿಮಾಟೊಗ್ರಫಿ ತಿದ್ದುಪಡಿ ಮಸೂದೆ-2023 ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, 'ಸಿನಿಮಾಗಳ ಬಳಿಕ, ಒಟಿಟಿ ವೇದಿಕೆಗಳು ಇತ್ತೀಚಿನ ದಿನಗಳಲ್ಲಿ ಬಹು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಈ ವೇದಿಕೆಗಳಲ್ಲಿ ಅತ್ಯುದ್ಭುತವಾದ ಕೆಲಸಗಳು ನಡೆಯುತ್ತಿವೆ. ಆದರೆ, ತಂಬಾಕು ಸೇವನೆ, ಧೂಮಪಾನದಂಥ ದೃಶ್ಯಗಳು ಈಚೆಗೆ ಟ್ರೆಂಡ್ ಆಗಿ ಬೆಳೆದಿವೆ' ಎಂದು ಅಭಿಪ್ರಾಯಪಟ್ಟರು.
'ನಟರು, ನಿರ್ದೇಶಕರು, ಚಿತ್ರಕಥೆಗಾರರು ಮತ್ತು ಪ್ರೇಕ್ಷಕರು ಯಾರೂ ಇಂಥ ದೃಶ್ಯಗಳನ್ನು ಬಯಸುವುದಿಲ್ಲ. ಹಾಗಾದರೆ ಈ ಪ್ರವೃತ್ತಿ ಹಿಂದಿರುವವರು ಯಾರು? ಇಂತಹ ಪ್ರವೃತ್ತಿಯ ಹಿಂದೆ ನಮ್ಮ ದೇಶದ 13.5 ಲಕ್ಷ ಜನರ ಕಾಳಜಿಯಿಲ್ಲದ ಶಕ್ತಿಗಳು ಇದ್ದಿರಬೇಕಾದರೆ, ಒಟಿಟಿಗಳಲ್ಲಿ ತಂಬಾಕು ಸೇವನೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ಬಂಧಿಸುವ ನಿರ್ಧಾರದ ಮೂಲಕ ಕಾಳಜಿ ಮೆರೆದಿರುವ ಸರ್ಕಾರಕ್ಕೆ ನಾವು ಕೃತಜ್ಞರಾಗಿರುವುದು ಬೇಡವೇ' ಎಂದು ಕೇಳಿದರು.
ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಸಿನಿಮಾಟೊಗ್ರಫಿ ತಿದ್ದುಪಡಿ ಮಸೂದೆಯು- 2023 ಸಿನಿಮಾ ಪೈರಸಿಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದ್ದು, ಲೋಕಸಭೆಯಲ್ಲಿ ಸೋಮವಾರ ಅಂಗೀಕಾರ ಪಡೆಯಿತು.
ಸಿನಿಮಾ ಮಂದಿರಗಳು ಹಾಗೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುತ್ತಿರುವ ತಂಬಾಕು ಉತ್ಪನ್ನ ಬಳಕೆ ವಿರೋಧಿ ಎಚ್ಚರಿಕೆಯ ಸಂದೇಶಗಳನ್ನು ಒಟಿಟಿ ವೇದಿಕೆಗಳಲ್ಲೂ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸರ್ಕಾರವು ಸೂಚಿಸಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ, ಆನ್‌ಲೈನ್ ವೇದಿಕೆಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ಎಚ್ಚರಿಕೆಯ ಕುರಿತು ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಾಗೂ ಮಧ್ಯ ಭಾಗದಲ್ಲಿ ಕನಿಷ್ಠ 30 ಸೆಕೆಂಡ್‌ಗಳ ಕಾಲ ಎಚ್ಚರಿಕೆಯ ಸಂದೇಶವನ್ನು ಪ್ರಸಾರ ಮಾಡಬೇಕಿದೆ.