ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಂದು ಭಾನುವಾರ ದೇಶವಾಸಿಗಳೊಂದಿಗೆ ತಮ್ಮ ಅನಿಸಿಕೆ ಹಾಗೂ ಅಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಮನದ ಮಾತಿನ 104ನೇ ಸಂಚಿಕೆ ಇದಾಗಿದ್ದು, ಬೆಳಗ್ಗೆ 11 ಗಂಟೆಗೆ ಆಕಾಶವಾಣಿ ಮತ್ತು ದೂರದರ್ಶನ ಎಲ್ಲಾ ವಾಹಿನಿಗಳಲ್ಲಿ ಪ್ರಸಾರವಾಗಿದೆ. ನನ್ನ ಪ್ರಿಯ ಕುಟುಂಬದ ಸದಸ್ಯರೆ, ನಮಸ್ಕಾರ.ಮನದ ಮಾತಿನ ಆಗಸ್ಟ್ ಸಂಚಿಕೆಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಎಂದು ಮಾತುಗಳನ್ನು ಆರಂಭಿಸಿದ ಪ್ರಧಾನಿ ಮೋದಿ, ಶ್ರಾವಣ ಎಂದರೆ ಮಹಾಶಿವನ ಮಾಸ, ಸಂಭ್ರಮಾಚರಣೆ ಮತ್ತು ಸಂತೋಷದ ತಿಂಗಳಿದು. ಚಂದ್ರಯಾನದ ಯಶಸ್ಸು ಈ ಸಂಭ್ರಮದ ವಾತಾವರಣಕ್ಕೆ ಮತ್ತಷ್ಟು ಕಳೆ ತಂದಿದೆ. ಚಂದ್ರಯಾನ ಚಂದ್ರನನ್ನು ತಲುಪಿ ಮೂರು ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈ ಯಶಸ್ಸು ತುಂಬಾ ದೊಡ್ಡದಾಗಿದೆ, ಅದರ ಬಗ್ಗೆ ಎಷ್ಟು ಚರ್ಚೆ ಮಾಡಿದರೂ ಕಡಿಮೆಯೇ ಎಂದರು.
ಮಿಷನ್ ಚಂದ್ರಯಾನವು ನವ ಭಾರತದ ಚೈತನ್ಯದ ಸಂಕೇತವಾಗಿದೆ, ಅದು ಎಲ್ಲಾ ಸಂದರ್ಭಗಳಲ್ಲಿಯೂ ಗೆಲ್ಲಲು ಬಯಸುತ್ತಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಹೇಗೆ ಗೆಲ್ಲಬೇಕೆಂದು ತಿಳಿದಿದೆ ಎಂದರು.
ದೆಹಲಿಯ ಜಿ20 ಸಭೆ ಬಹಳ ಮುಖ್ಯ: ಮುಂದಿನ ತಿಂಗಳು ನಡೆಯುವ ಜಿ20 ಸಭೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ 40ಕ್ಕೂ ಹೆಚ್ಚಿನ ವಿವಿಧ ದೇಶಗಳು ಭಾಗಿಯಾಗಲಿವೆ. ವಾರಣಾಸಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 800 ಶಾಲೆಯಲ್ಲಿ ಮಕ್ಕಳು ಭಾಗಿಯಾಗಿದ್ದರು. ಇನ್ನು ಸೂರತ್ನಲ್ಲಿ ನಡೆದ ಸಭೆಲ್ಲಿ 15 ರಾಜ್ಯದ 15 ಲಕ್ಷ ಮಹಿಳೆಯರು ಭಾಗಿಯಾಗಿದ್ದರು.
ಚಂದ್ರಯಾನ-3 ಯಶಸ್ಸಿನಿಂದ ದೇಶದಲ್ಲಿ ಉತ್ಸಾಹ ತುಂಬಿದೆ. ಭವಿಷ್ಯದ ದಿನಗಳಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆ ಮಾಡಲಿದೆ. ಎಲ್ಲರ ಪರಿಶ್ರಮದಿಂದ ಯಶಸ್ವಿ ಸಿಕ್ಕಿದೆ. ಜಿ-20 ಶೃಂಗಸಭೆಗೆ ಭಾರತ ಎಲ್ಲ ಪೂರ್ವತಯಾರಿ ಮಾಡಿಕೊಂಡಿದೆ. 40 ರಾಷ್ಟ್ರಗಳ ಅಧ್ಯಕ್ಷರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗುತ್ತಾರೆ. ಭಾರತದಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ವರ್ಲ್ಡ್ ಯೂನಿವರ್ಸಿಟಿ ಗೇಮ್ನಲ್ಲಿ ಭಾಗಿಯಾದ ಕ್ರೀಡಾಪಟುಗಳಿಗೆ ಪ್ರಧಾನಿ ಅಭಿನಂದನೆ: ಈ ಬಾರಿ ನಡೆದ ವರ್ಲ್ಡ್ ಯೂನಿವರ್ಸಿಟಿ ಗೇಮ್ನಲ್ಲಿ ಭಾಗಿಯಾಗಿ ಮೆಡಲ್ಗೆದ್ದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿಯವರು ಅಭಿನಂದನೆ ಸಲ್ಲಿಸಿದರು. ಈ ಗೇಮ್ನಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶದ ಕ್ರೀಡಾಪಟು ಪ್ರಗತಿ ಅವರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ಈ ಬಾರಿ ಅತಿ ಹೆಚ್ಚು ಧ್ವಜಗಳನ್ನು ಖರೀದಿ: ಸ್ವಾತಂತ್ರ್ಯೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನ ಕರೆ ನೀಡಲಾಗಿತ್ತು. ಈ ಬಾರಿ ಅತಿ ಹೆಚ್ಚು ಧ್ವಜಗಳನ್ನು ಖರೀದಿಸಲಾಗಿದೆ. ನಮ್ಮ ಮಣ್ಣು ನಮ್ಮ ದೇಶ ಅಭಿಯಾನದ ಅಡಿ ದೇಶದ ವಿವಿಧ ಪ್ರದೇಶಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ಈ ಮಣ್ಣಿನಿಂದ ಅಮೃತ ವಾಟಿಕಾ ನಿರ್ಮಾಣ ಮಾಡಲಾಗುತ್ತದೆ ಎಂದರು.