ವಾರಾಣಸಿ: ಉತ್ತರ ಪ್ರದೇಶದ ಕಾಶಿ ದೇಗುಲದ ಸಂಕೀರ್ಣದಲ್ಲಿ ಇರುವ ಜ್ಞಾನವಾಪಿ ಮಸೀದಿ ವಿವಾದವನ್ನು ಕೋರ್ಟ್‌ನ ಕಟಕಟೆಯ ಹೊರಗೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳುವ ಸಂಬಂಧ ಹಿಂದೂಪರ ಸಂಘಟನೆಯಾದ ವಿಶ್ವ ವೇದಿಕ್ ಸನಾತನ ಸಂಘವು ಇಂಗಿತ ವ್ಯಕ್ತಪಡಿಸಿದೆ.
ಸಂಘದ ಅಧ್ಯಕ್ಷ ಜಿತೇಂದ್ರ ಸಿಂಗ್ ಬಿಸೆನ್ ಅವರು, ಈ ಕುರಿತು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎರಡೂ ಕಡೆಯ ಅರ್ಜಿದಾರರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶದನ್ವಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸನಾತನ ಸಂಘದ ಆಮಂತ್ರಣವು ಚರ್ಚೆಗೆ ಗ್ರಾಸವಾಗಿದೆ.
ಹಿಂದೂ ಪರ ಮುಖ್ಯ ಅರ್ಜಿದಾರ ರಾಕಿ ಸಿಂಗ್ ಅವರ ಒಪ್ಪಿಗೆ ಮೇರೆಗೆ ಈ ಪತ್ರ ಬರೆಯಲಾಗಿದೆ. ಇಬ್ಬರೂ ಮುಖಾಮುಖಿಯಾಗಿ ಕುಳಿತು ಪರಸ್ಪರ ಒಪ್ಪಿಗೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾದರೆ ಇದಕ್ಕಿಂತ ಉತ್ತಮವಾದ ಪರಿಹಾರ ಬೇರೊಂದಿಲ್ಲ ಎಂದು ಬಿಸೆನ್ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಎರಡು ಸಮುದಾಯಗಳ ನಡುವೆ ಸಾಂವಿಧಾನಿಕವಾಗಿ ಹೋರಾಟ ನಡೆಯುತ್ತಿದೆ. ಆದರೆ, ಕೆಲವು ಸಮಾಜಘಾತುಕ ಶಕ್ತಿಗಳು ಇದರ ಲಾಭ ಪಡೆಯಲು ಹವಣಿಸುತ್ತಿವೆ. ಇದು ಇಬ್ಬರಿಗಷ್ಟೇ ಹಾನಿಕರವಲ್ಲ; ದೇಶ ಹಾಗೂ ಸಮಾಜಕ್ಕೂ ಆಘಾತಕಾರಿಯಾಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ವಿವಾದವನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕಿದೆ. ಇದು ನಮ್ಮೆಲ್ಲರ ಕರ್ತವ್ಯವೂ ಹೌದು. ದೇಶದ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಉತ್ತಮವಾಗಿದೆ. ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎನ್ನುವುದಾದರೆ ಇದನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ವಿವರಿಸಲಾಗಿದೆ.
'ಜ್ಞಾನವಾಪಿ'ಯನ್ನು ಮಸೀದಿ ಎಂದು ಕರೆದರೆ ವಿವಾದವಾಗುತ್ತದೆ. ಹಾಗಾಗಿ, ಅದನ್ನು ಜ್ಞಾನವಾಪಿ ಎಂದಷ್ಟೇ ಕರೆಯಬೇಕಿದೆ. ಅಲ್ಲಿ ಹಲವು ವಿಗ್ರಹಗಳಿವೆ. ಜ್ಯೋತಿರ್ಲಿಂಗ ಇದೆಯೆಂದು ಅಲ್ಲಿನ ಗೋಡೆಗಳೇ ಹೇಳುತ್ತಿವೆ. ಅದು ಮಸೀದಿ ಎನ್ನುವುದಾದರೆ ಅದರೊಳಗೆ ಇರುವ ತ್ರಿಶೂಲಕ್ಕೇನು ಕೆಲಸ' ಎಂದು ಇತ್ತೀಚೆಗೆ ಪ್ರಶ್ನೆ ಮುಂದಿಟ್ಟಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, 'ಮುಸ್ಲಿಂ ಸಮುದಾಯದಿಂದ ಐತಿಹಾಸಿಕ ತಪ್ಪಾಗಿದೆ. ಅದನ್ನು ಅವರು ಒಪ್ಪಿಕೊಳ್ಳಬೇಕಿದೆ' ಎಂದಿದ್ದರು.