ನಾವು ಆರೋಗ್ಯವಾಗಿರಬೇಕು ಅಂದ್ರೆ ನಮ್ಮ ಜೀವನಶೈಲಿ ಉತ್ತಮವಾಗಿರಬೇಕು ಜೊತೆಗೆ ನಾವು ಸೇವಿಸುವ ಆಹಾರವೂ ಕೂಡ ಅಷ್ಟೇ ಆರೋಗ್ಯಕರವಾಗಿ ಇರಬೇಕು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಹಳೆಯ ಆಹಾರ ಪದ್ಧತಿಯನ್ನು ನಾವು ಇಷ್ಟು ವರ್ಷ ಅನುಸರಿಸಿಕೊಂಡು ಬಂದಿದ್ದೇವೆ ಈಗ ಇವೆಲ್ಲವೂ ಬದಲಾಗುತ್ತಿದೆ. ತೂಕ ಇಳಿಕೆಗೆ ಸಹಾಯಕವಾಗುವಂತಹ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ. ನಾವು ಅನಾದಿಕಾಲದಿಂದಲೂ ಬಳಕೆ ಮಾಡಿಕೊಂಡು ಬಂದಿರುವ ಆಹಾರ ಪದ್ಧತಿ ಯಾವುದು ಅಥವಾ ಈಗಿನ ಆಹಾರ ಪದ್ಧತಿ ಎಷ್ಟು ಸೂಕ್ತ ನೋಡೋಣ.
ಮೂರು ಹೊತ್ತಿನ ಆಹಾರ ಪದ್ಧತಿ
ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಹಾರ ಪದ್ಧತಿ ಇದು. ಸೇವಿಸುವ ಆಹಾರವನ್ನು ಬೆಳಗಿನ ಉಪಹಾರ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ಎಂದು ಮೂರು ವಿಧಗಳಾಗಿ ವಿಭಾಗಿಸಲಾಗಿದೆ. ದಿನದ 24 ಗಂಟೆಗಳಲ್ಲಿ ಕೇವಲ ಮೂರು ಹೊತ್ತಿನ ಆಹಾರ ಮಾತ್ರ ಸೇವಿಸುವುದು.
ಆದರೆ ಈ ಮೂರು ಹೊತ್ತಿನ ಊಟಕ್ಕೂ ಕೂಡ ಆರೋಗ್ಯಕರವಾದ ಹಾಗೂ ಹೆಚ್ಚು ಪ್ರಮಾಣದ ಆಹಾರವನ್ನೇ ಸೇವಿಸಬೇಕು. ಈ ರೀತಿ ಮಾಡುವುದರಿಂದ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಮೊದಲನೇದಾಗಿ ಜೀರ್ಣಕ್ರಿಯೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಬೆಳಗ್ಗಿನ ಆಹಾರದಿಂದ ಮಧ್ಯಾಹ್ನದ ಆಹಾರದ ವರೆಗೆ ಸಾಕಷ್ಟು ಗಂಟೆಗಳ ಕಾಲ ಅಂತರವಿರುತ್ತದೆ. ಹಾಗಾಗಿ ಬೆಳಿಗ್ಗೆ ಗಟ್ಟಿಯಾದ ಆಹಾರ ಮಧ್ಯಾಹ್ನ ಉತ್ತಮ ಪ್ರಮಾಣದ ಊಟ ಸೇವಿಸಬಹುದು. ರಾತ್ರಿ ಅಲ್ಪಾಹಾರ ಸೇವಿಸಿ.
ಅಲ್ಪಾಹಾರ ಸೇವನೆ
ಆದರೆ ಈಗ ತೂಕ ಇಳಿಕೆ ಎನ್ನುವ ಪರಿಕಲ್ಪನೆಯಲ್ಲಿ ತಜ್ಞರು ಈ ಮೂರು ವಿಧದ ಪೂರ್ಣ ಪ್ರಮಾಣದ ಆಹಾರದ ಬದಲು, ಸ್ವಲ್ಪ ಸ್ವಲ್ಪವೇ ಆಹಾರ ಹೆಚ್ಚು ಸಮಯ ತೆಗೆದುಕೊಳ್ಳುವುದನ್ನು ಸೂಚಿಸುತ್ತಾರೆ. ಅಂದ್ರೆ ಮೂರು ಹೊತ್ತು ಸರಿಯಾಗಿ ಆಹಾರ ಸೇವಿಸುವುದರ ಬದಲು ದಿನದಲ್ಲಿ ನಾಲ್ಕರಿಂದ ಐದು ಅಥವಾ ಆರು ಸಲ ಸ್ವಲ್ಪ ಸ್ವಲ್ಪವೇ ಆಹಾರವನ್ನು ಸೇವಿಸಬೇಕು ಎಂದು ಹೇಳುತ್ತಾರೆ. ಉದಾಹರಣೆಗೆ ಬೆಳಿಗ್ಗೆ ಜ್ಯೂಸ್ ಹಾಗೂ ಸ್ವಲ್ಪ ಸಲಾಡ್ ಸೇವಿಸುವುದು, ಮಧ್ಯಾಹ್ನದ ಊಟಕ್ಕಿಂತಲೂ ಮೊದಲು ತರಕಾರಿ ಸೇವನೆ, ಊಟವಾಗಿ ಸ್ವಲ್ಪ ಸಮಯದ ನಂತರ ಡ್ರೈ ಫ್ರೂಟ್ಸ್ ಸೇವನೆ, ರಾತ್ರಿ ಲಘುವಾದ ಆಹಾರ ಹೀಗೆ ಮೂರಕ್ಕಿಂತ ಹೆಚ್ಚು ಬಾರಿ ಆಹಾರ ಸೇವಿಸುವುದನ್ನು ತಿಳಿಸಲಾಗುತ್ತದೆ. ಈ ರೀತಿ ವಿಂಗಡಿಸಿ ಆಹಾರ ಸೇವನೆ ಮಾಡಿದರೆ ಅತಿ ಕಡಿಮೆ ಪ್ರಮಾಣದ ಆಹಾರ ದೇಹಕ್ಕೆ ಸೇರುತ್ತದೆ ಜೊತೆಗೆ ಇದು ತೂಕ ಇಳಿಕೆಗೆ ಸಹಾಯಕವಾಗುತ್ತದೆ ಎನ್ನುವುದು ಈಗಿನ ಫಿಟ್ನೆಸ್ ತಜ್ಞರ ಸಲಹೆ.
ಈ ರೀತಿ ಹಳೆಯ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಬಿಟ್ಟು ಹೊಸದಾಗಿ ರೂಢಿಸಿಕೊಂಡ ಸ್ವಲ್ಪ ಸ್ವಲ್ಪ ಆಹಾರವನ್ನು ದಿನದ ಹೆಚ್ಚು ಬಾರಿ ಸೇವಿಸುವ ಹೊಸ ಪದ್ಧತಿ ಉತ್ತಮ ಎನ್ನುವುದು ತಜ್ಞರ ವಾದ. ಅವರ ಪ್ರಕಾರ ಚಯಾಪಚಯ ಕ್ರಿಯೆ ಹಾಗೂ ದೇಹದ ಸಂಯೋಜನ ಶಕ್ತಿ ಹೆಚ್ಚಾಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ತೂಕ ಇಳಿಕೆಗೆ ಸಹಾಯಕವಾಗುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯಬಹುದು. ಕೆಲವು ಅಧ್ಯಯನಗಳು ಇದನ್ನು ಬೆಂಬಲಿಸಿದರೂ ಇದರಿಂದ ಸಿಗುವ ಪ್ರಯೋಜನ ಹೆಚ್ಚೇನು ಇಲ್ಲ. ಅದಕ್ಕಿಂತ ಹೆಚ್ಚಾಗಿ ಮೂರು ಹೊತ್ತು ಆಹಾರ ಸೇವಿಸುವ ಆಹಾರ ಪದ್ಧತಿಯೇ ಇದಕ್ಕಿಂತ ಹೆಚ್ಚು ಉತ್ತಮ ಎಂದು ಹಲವು ಸಂಶೋಧನೆಗಳು ಹೇಳುತ್ತವೆ.
ದಿನಕ್ಕೆ ಮೂರು ಊಟ ಅಥವಾ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ರಕ್ತದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗುವುದನ್ನು ತಡೆಗಟ್ಟುತ್ತದೆ. ಹೃದಯ ಸಂಬಂಧಿ ಕಾಯಿಲೆ ಬಾರದೆ ಇರುವಂತೆ ನೋಡಿಕೊಳ್ಳುತ್ತದೆ. ಕಡಿಮೆ ಆಹಾರ ಹೆಚ್ಚು ಅವಧಿಗೆ ಸೇರಿಸುವ ಆಹಾರ ಪದ್ಧತಿಗಿಂತಲೂ, ದಿನಕ್ಕೆ ಮೂರು ಹೊತ್ತು ಊಟ ಮಾಡುವ ಆಹಾರ ಪದ್ಧತಿಯಲ್ಲಿಯೇ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. 4ಕ್ಕಿಂತ ಹೆಚ್ಚಿನ ಬಾರಿ ಊಟ ಸೇವಿಸಿದರೆ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನು ನಿಯಮಿತ ಮೂರು ಹೊತ್ತಿನ ಆಹಾರ ಸೇವನೆ ರಕ್ತನಾಳದ ಸಮಸ್ಯೆ ಹಾಗೂ ಮಧುಮೇಹ ನಿಯಂತ್ರಣ ಮಾಡಬಲ್ಲದು ಎಂದು ಅಮೆರಿಕಾದ ಸ್ಟಡಿ ಒಂದರಲ್ಲಿ ತಿಳಿಸಲಾಗಿದೆ.
ಕೆಲವು ಅಧ್ಯಯನಗಳು ಹೇಳುವ ಪ್ರಕಾರ ದಿನದಲ್ಲಿ ಹೆಚ್ಚು ಬಾರಿ ಆಹಾರ ಸೇವನೆ ತೂಕ ಇಳಿಕೆಯನ್ನು ಪ್ರೋತ್ಸಾಹಿಸುತ್ತದೆ. ಆದರೆ ಈ ಅಧ್ಯಯನದ ಬಗ್ಗೆ ಮಿಶ್ರ ಪ್ರಕ್ರಿಯೆ ಇದೆ. ಉದಾಹರಣೆಗೆ ಮೂರು ಹೊತ್ತು ದಿನದಲ್ಲಿ ಊಟ ಮಾಡುವುದು ಅಥವಾ ಆಗಾಗ ಸಣ್ಣ ಸಣ್ಣ ಊಟದ ಕ್ರಮವನ್ನು ಅನುಸರಿಸುವುದು ಎರಡು ಮೈಕ್ರೋ ನ್ಯೂಟ್ರಿಯೆಂಟ್ ವಿತರಣೆಯನ್ನು ಬಳಸಿಕೊಂಡು ನಮ್ಮ ದೇಹದ ತೂಕವನ್ನು ನಿರ್ವಹಿಸಲು ಬೇಕಾಗಿರುವ ಕ್ಯಾಲೋರಿಯನ್ನು ಪಡೆಯುತ್ತವೆ. ತಜ್ಞರ ಪ್ರಕಾರ ಎರಡು ರೀತಿಯ ಆಹಾರ ಕ್ರಮದಲ್ಲಿ ಎನರ್ಜಿ ಬರ್ನ್ ಆಗುವುದು ಅಥವಾ ಕೊಬ್ಬಿನ ನಷ್ಟದಲ್ಲಿ ಯಾವ ವ್ಯತ್ಯಾಸವು ಇರುವುದಿಲ್ಲ. ಆದರೆ ಇಲ್ಲಿ ಮೂರು ಹೊತ್ತು ಊಟವನ್ನು ಮಾಡುವವರಿಗಿಂತ ಐದರಿಂದ ಆರು ಬಾರಿ ಚಿಕ್ಕ ಚಿಕ್ಕ ಆಹಾರಗಳನ್ನು ಸೇವಿಸುವವರಲ್ಲಿ ಹಸಿವಿನ ಮಟ್ಟ ಹಾಗೂ ತಿನ್ನುವ ಬಯಕೆ ಹೆಚ್ಚಾಗಿರುತ್ತದೆ.
ಯಾವುದೇ ಆಹಾರ ಪದ್ಧತಿ ಆಗಿರಲಿ ನಾವು ಎಷ್ಟು ಆಹಾರವನ್ನು ತಿನ್ನುತ್ತೇವೆ ಯಾವ ಸಮಯದಲ್ಲಿ ತಿನ್ನುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ಆರೋಗ್ಯಕರವಾದ ಆಹಾರವನ್ನು ಸೇವಿಸಿದರೆ ಎಲ್ಲವೂ ಒಳ್ಳೆಯದೇ. ಆದಾಗ್ಯೂ ಇಲ್ಲಿಯವರೆಗಿನ ಎಲ್ಲಾ ಅಧ್ಯಯನಗಳು ದಿನಕ್ಕೆ ಕೇವಲ ಮೂರು ಹೊತ್ತು ತಿನ್ನುವುದು, ಉಪಹಾರ ಮತ್ತು ಊಟದ ನಡುವೆ ಐದರಿಂದ ಆರು ಗಂಟೆ ಅಂತರ ಇಟ್ಟುಕೊಳ್ಳುವುದು ರಾತ್ರಿ ಊಟ ಆದ ನಂತರ 18ರಿಂದ 19 ಗಂಟೆಗಳ ಕಾಲ ಆಹಾರ ಸೇವಿಸದೆ ಇರುವುದು ಇವೆಲ್ಲವೂ ಮಾನವನ ದೇಹಕ್ಕೆ ಒಗ್ಗಿಕೊಂಡಿದೆ ಜೊತೆಗೆ ತೂಕ ಇಳಿಕೆಯಾಗುವುದಕ್ಕೂ ಆರೋಗ್ಯಕರ ಜೀವನ ನಡೆಸುವುದಕ್ಕೂ ಸಹಾಯಕವಾಗುತ್ತದೆ. ಹಾಗಾಗಿ ಆರೋಗ್ಯಕರವಾದ ಆಹಾರ ಸೇವಿಸುವುದು ಮುಖ್ಯ ಅದರಲ್ಲೂ ದಿನದಲ್ಲಿ ಮೂರು ಬಾರಿ ಆಹಾರ ಸೇವಿಸುವುದು, ಒಳ್ಳೆಯದು ಎಂಬುದು ಹಲವು ಅಧ್ಯಯನಗಳು ಸಾಬೀತುಪಡಿಸುತ್ತವೆ.