ಒಡಿಶಾ: ಬುಧವಾರ (ಆಗಸ್ಟ್ 23) ಚಂದ್ರಯಾನ-3 ಯಶಸ್ಸಿನ ಬಗ್ಗೆ ಭಾರತೀಯರು ಮಾತ್ರವಲ್ಲ, ಇಡೀ ವಿಶ್ವವೇ ಸಂಭ್ರಮಿಸಿತ್ತು. ಬುಧವಾರ ಸಂಜೆ 6:04 ಕ್ಕೆ ಚಂದ್ರಯಾನ-3 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ತಕ್ಷಣ ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಜನಿಸಿದ ಹಲವಾರು ಶಿಶುಗಳಿಗೆ 'ಚಂದ್ರಯಾನ' ಎಂದು ಹೆಸರಿಸಲಾಗಿದೆ.
ಮಗುವಿನ ಹೆಸರು ಚಂದ್ರಯಾನ
ಒಡಿಶಾದ ಕೇಂದ್ರಪಾರ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಜನಿಸಿದ ನಾಲ್ಕು ಶಿಶುಗಳು ಮೂರು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಅವರ ಪೋಷಕರು ಚಂದ್ರಯಾನ ಎಂದು ಹೆಸರಿಸಿದ್ದಾರೆ.
ಪೋಷಕರಾದ ಪ್ರವತ್ ಮಲಿಕ್ 'ಇದು ನಮಗೆ ಡಬಲ್ ಸಂತೋಷ ತಂದಿದೆ. ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಕೆಲವೇ ನಿಮಿಷಗಳಲ್ಲಿ ನಮ್ಮ ಮಗು ಜನಿಸಿತು. ಆದ್ದರಿಂದ ಮಗುವಿಗೆ ಚಂದ್ರಯಾನ' ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದರು.
21 ನೇ ದಿನದ ಪೂಜೆಯ ನಂತರ ನಾಮಕರಣ
ಅರಿಪದ ಗ್ರಾಮದ ನಿವಾಸಿ ಮಲ್ಲಿಕ್ ಎಂಬವರ ಪತ್ನಿ ರಾಣು ಎಂಬುವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಮಗು ಜನಿಸಿದ 21 ನೇ ದಿನದಂದು ಪೂಜೆಯ ನಂತರ ಮಗುವಿಗೆ ನಾಮಕರಣ ಮಾಡಲಾಗುತ್ತದೆ. ಇವರೀಗ ಮಗುವಿಗೆ ಚಂದ್ರಯಾನದ ಹೆಸರಿಡಲು ಹಿರಿಯರಿಗೆ ಸೂಚಿಸಿದ್ದಾರೆ.
ಚಂದ್ರಯಾನ ಎಂದರೆ ಚಂದ್ರನ ವಾಹನ ಎಂದರ್ಥವಾದ್ದರಿಂದ ಮಗುವಿನ ಹೆಸರೂ 'ಚಂದ್ರ' ಅಥವಾ 'ಲೂನಾ' ಆಗಿರಬಹುದು ಎಂದು ರಾನು ಹೇಳಿದರು. ಆದರೂ ಚಂದ್ರಯಾನ ಒಂದು ಸೊಗಸಾದ ಹೆಸರು. 21ನೇ ದಿನದ ಪೂಜೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ತಾಲ್ಚುವಾ ಗ್ರಾಮದ ದುರ್ಗಾ ಮಂಡಲ್, ನೀಲಕಂಠಪುರದ ಜೋಶ್ನ್ಯಾರಾಣಿ ಬಾಲ್ ಮತ್ತು ಅಂಗುಲೇ ಗ್ರಾಮದ ಬಬಿನಾ ಸೇಥಿ ಕೂಡ ಬುಧವಾರ ಸಂಜೆ ಶಿಶುಗಳಿಗೆ ಜನ್ಮ ನೀಡಿದ್ದಾರೆ. ದುರ್ಗಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇನ್ನಿಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಕೇಂದ್ರಪಾರ ಸರ್ಕಾರಿ ಆಸ್ಪತ್ರೆಯ ಮುಖ್ಯ ನರ್ಸ್ ಅಂಜನಾ ಸಾಹು ಮಾತನಾಡಿ, ಎಲ್ಲಾ ಹೊಸ ತಾಯಂದಿರು ತಮ್ಮ ಮಕ್ಕಳಿಗೆ ಚಂದ್ರಯಾನದ ಹೆಸರಿಡಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.